ಪ್ರತಿಕ್ಷಣ ಗ್ರಹಿಸುವಿಕೆ, ಕಲಿಯುವಿಕೆಯಿಂದ ಹಂತ ಹಂತವಾಗಿ ಮಕ್ಕಳು ದೊಡ್ಡವರಾಗುತ್ತಾರೆ. ಆದ್ರೆ, ಈ ಮುಗ್ಧರು ಯಾವುದೋ ಅಥವಾ ಯಾರದ್ದೋ ಪ್ರಭಾವಕ್ಕೊಳಗಾಗಿ ಒಂದು ಕ್ಷಣ ಎಡವುದುಂಟು. ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಯಾವ ರೀತಿ ಮನಃಪರಿವರ್ತನೆ ಮಾಡಲಾಗುತ್ತದೆ, ಇದರಲ್ಲಿ ಸರ್ಕಾರಿ ವೀಕ್ಷಣಾಲಯದ ಪಾತ್ರವೇನು... ಇಲ್ಲಿದೆ ಒಂದಿಷ್ಟು ಮಾಹಿತಿ.
25 ಮಕ್ಕಳ ರಕ್ಷಣಾ ಸಾಮರ್ಥ್ಯವಿರುವ ಕಲಬುರಗಿಯ ವೀಕ್ಷಣಾಲಯದಲ್ಲೀಗ ಕಾನೂನು ಸಂಘರ್ಷಕ್ಕೊಳಪಟ್ಟ 6 ಮಕ್ಕಳಿದ್ದಾರೆ. ಎನ್‌ಜಿಓದಿಂದ ಆನ್‌ಲೈನ್ ತರಬೇತಿ, ವೈಯಕ್ತಿಕ ವ್ಯಕ್ತಿತ್ವ ಹೆಚ್ಚಿಸಲು ಸ್ಕಿಲ್ ಡೆವಲಪ್ಮೆಂಟ್ ಸೇರಿ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಜನೆಗೂ ಯಾವುದೇ ತೊಂದರೆಯಿಲ್ಲ.
ಕಾನೂನು ಸಂಘರ್ಷಕ್ಕೊಳಗಾದ ಎಳೆಯರ ಮನ ಪರಿವರ್ತನೆ.. ಸುಲಭ ಸಾಧ್ಯ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ, ಪೌಷ್ಟಿಕ ಆಹಾರ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಸೌಲಭ್ಯಕ್ಕೆ ಇಲ್ಲಿ ಯಾವುದೇ ಕೊರತೆಯಿಲ್ಲ. ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಇಲ್ಲಿನ ಸಿಬ್ಬಂದಿ ಮಾಡುತ್ತಿದ್ದಾರೆ. ವೀಕ್ಷಣಾಲಯ ಇನ್ನೂ ಪರಿಣಾಮಕಾರಿ ಕೆಲಸ ನಿರ್ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬೆಳಗಾವಿ ಸರ್ಕಾರಿ ವೀಕ್ಷಣಾಲಯದಲ್ಲೂ ಕೂಡ ಮಕ್ಕಳಿಗೆ ವಿಶೇಷ ಕಾಳಜಿ ತೋರಿಸುವ ಮೂಲಕ ಅವರ ಮನಃಪರಿವರ್ತನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮಾದಕ ವಸ್ತುಗಳು ಸಾಗಣೆ ಆಗುವುದರಿಂದ ಮಕ್ಕಳು ದಾರಿ ತಪ್ಪುತ್ತಾರೆ ಎನ್ನುವ ಅಭಿಪ್ರಾಯ ಕೆಲವರದ್ದಾಗಿದೆ. ಹಾಗಾಗಿ, ಮಕ್ಕಳ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಿದರೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದು ಅಂತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವಿ ರತ್ನಾಕರ.
ದಾರಿ ತಪ್ಪಿದ ಮಕ್ಕಳ ಮನ ಪರಿವರ್ತಿಸಲು ಶ್ರಮಿಸುತ್ತಿರುವ ಈ ವೀಕ್ಷಣಾಲಯಗಳ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತವಾಗ್ತಿದೆ.