ಕಲಬುರಗಿ: ಸಮಾಜದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಜೈಲು ಶಿಕ್ಷೆ ಕಡ್ಡಾಯ. ಆದ್ರೆ ಅಪ್ರಾಪ್ತ ವಯಸ್ಸಿನ ಮಕ್ಕಳು ತಿಳಿದೋ ತಿಳಿಯದೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರ ಮನ ಪರಿವರ್ತನೆಗಾಗಿ ಇರುವ ಸರ್ಕಾರಿ ವೀಕ್ಷಣಾಲಯದಲ್ಲಿ ಯಾವ ರೀತಿ ಅವರ ಮನ ಪರಿವರ್ತನೆ ಮಾಡಲಾಗುತ್ತದೆ ಗೊತ್ತಾ? ಇಲ್ಲಿದೆ ಸರ್ಕಾರಿ ವೀಕ್ಷಣಾಲಯ ಕ್ರಮಗಳ ಒಂದಿಷ್ಟು ಮಾಹಿತಿ.
ತಪ್ಪು ಮಾಡದ ಮನುಷ್ಯನಿಲ್ಲ. ಆದ್ರೆ ಕೆಲ ಮುಗ್ಧ ಮನಸ್ಸಿನ ಮಕ್ಕಳು ಯಾವುದೋ ಪ್ರಭಾವಕ್ಕೊಳಗಾಗಿ ಕೆಲವೊಮ್ಮ ಎಡವುದುಂಟು. ಆದ್ರೆ ಅವರನ್ನು ಕಠಿಣ ಕ್ರಮಗಳ ಮೂಲಕ ಶಿಕ್ಷಿಸಲಾಗುವುದಿಲ್ಲ. ಅವರ ಮನ ಪರಿವರ್ತನೆಗಾಗಿಯೇ ಸರ್ಕಾರಿ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿದೆ.
ಕಲಬುರಗಿ ಸರ್ಕಾರಿ ವೀಕ್ಷಣಾಲಯ:
ತಿಳಿದೋ ತಿಳಿಯದೋ ಈ ಮುಗ್ಧ ಜೀವಗಳು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸುವಂತಿಲ್ಲ. ಜೈಲು ಶಿಕ್ಷೆಗೆ ಒಳಪಡಿಸಿದರೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀಳಬಹುದು. ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕಾದವರು ಮುಂದೆ ತಪ್ಪು ಹಾದಿ ಹಿಡಿಯಬಹುದು ಎನ್ನುವ ಕಾರಣಕ್ಕೆ ಸರ್ಕಾರಿ ವೀಕ್ಷಣಾಲಯದಲ್ಲಿ ಇಟ್ಟು ಅವರ ಮನ ಪರಿವರ್ತನೆಗೆ ಪ್ರಯತ್ನ ಮಾಡಬೇಕು ಎಂದು ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ ಹೇಳುತ್ತದೆ. ಅದರಂತೆ ಕಲಬುರಗಿ ನಗರದಲ್ಲಿ ಸರ್ಕಾರಿ ವೀಕ್ಷಣಾಲಯವಿದ್ದು, ಅಲ್ಲಿ ಬರುವ ಮಕ್ಕಳ ಮನ ಪರಿವರ್ತನೆಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
6 ಮಂದಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು:
25 ಮಕ್ಕಳ ರಕ್ಷಣಾ ಸಾಮರ್ಥ್ಯ ಇರುವ ಕಲಬುರಗಿಯ ವೀಕ್ಷಣಾಲಯದಲ್ಲಿ ಸದ್ಯ ಕಲಬುರಗಿ ಜಿಲ್ಲೆಯ ನಾಲ್ಕು ಹಾಗೂ ಯಾದಗಿರಿ ಜಿಲ್ಲೆಯ ಇಬ್ಬರು ಸೇರಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿದ್ದಾರೆ. ಮಕ್ಕಳ ಕಾನೂನು ಸಂಘರ್ಷಕ್ಕೆ ವಿಶೇಷ ನ್ಯಾಯಾಲಯ ಇರುವ ಕಾರಣ ಬಹುತೇಕ ಮಕ್ಕಳು ಹೆಚ್ಚಿನ ದಿನ ವೀಕ್ಷಣಾಲಯದಲ್ಲಿ ಇರುವುದಿಲ್ಲ. ಅವರು ಇರುವಷ್ಟು ದಿನ ಅವರ ಮನ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ.
ಮಕ್ಕಳಿಗೆ ತರಬೇತಿ:
ಮಕ್ಕಳಲ್ಲಿ ಮನಸ್ಥೈರ್ಯ ತುಂಬಲು ಪ್ರತಿ ಗುರುವಾರದಂದು ಬೆಂಗಳೂರು ಮೂಲದ ಎನ್‌ಜಿಒ ಸಂಸ್ಥೆಯಿಂದ ಆನ್‌ಲೈನ್ ತರಬೇತಿ, ವೈಯಕ್ತಿಕ ವ್ಯಕ್ತಿತ್ವ ಹೆಚ್ಚಿಸುವ ತರಬೇತಿ, ಸ್ಕಿಲ್ ಡೆವಲಪ್ಮೆಂಟ್ ತರಬೇತಿ, ಕಂಪ್ಯೂಟರ್ ತರಬೇತಿ, ಕಲೆ, ಚಿತ್ರಕಲೆ, ಕೈಗಾರಿಕೆ ಇತ್ಯಾದಿ ತರಬೇತಿಗಳನ್ನು ಮಕ್ಕಳ ಮನಸ್ಥಿತಿ ಮತ್ತು ಅವರ ಆಸೆಯ ಆಧಾರದಲ್ಲಿ ನೀಡಲಾಗುತ್ತಿದೆ.