ಕಲಬುರಗಿ:ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಹೇಳಿದರು.
ಕಲಬುರಗಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಟ್ರಾಮಾ ಕೇಂದ್ರದ ಕಟ್ಟಡ ಈಗಾಗಲೇ ಪೂರ್ಣಗೊಂಡಿದ್ದು, ಅಗತ್ಯ ಸಲಕರಣೆಗಳ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಸಿಬ್ಬಂದಿ ನೇಮಕಾತಿಯೊಂದೇ ಬಾಕಿ ಉಳಿದಿದೆ. ಟ್ರಾಮಾ ಕೇಂದ್ರದ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ತತ್ರೆ ಆರಂಭಕ್ಕೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಜಿಮ್ಸ್ ಸಹಯೋಗದೊಂದಿಗೆ ಜಿಲ್ಲಾಸ್ಪತ್ರೆ ಮುನ್ನಡೆದಿದೆ. ಒಂದಷ್ಟು ಸಿಬ್ಬಂದಿ ಕೊರತೆಯಿದ್ದು, ನೇಮಕಾತಿಗೆ ವೈದ್ಯರು ಮುಂದೆ ಬರುತ್ತಿಲ್ಲ. ಮೆರಿಟ್ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ಮೆಡಿಕಲ್ ಓದಿದವರಾದರೂ ಕನಿಷ್ಟ ಮೂರು ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಮುಂದಾಗಬೇಕು. ಹಾಗಾದಾಗ ಸಿಬ್ಬಂದಿ ಕೊರತೆ ನೀಗಿಸಬಹುದು ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಜರಿದ್ದರು. ನಂತರ ಸಚಿವರುಗಳ ನೇತೃತ್ವದಲ್ಲಿ ಜಿಮ್ಸ್ ಸಭಾಂಗಣದಲ್ಲಿ ಆಡಳಿತ ಪರಿಷತ್ ಸಭೆ ನಡೆಸಲಾಯಿತು.