ಕಲಬುರಗಿ :ಕೆಇಎ ಪರೀಕ್ಷೆಯ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಬಂಧನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಮೊಬೈಲ್ ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳಿಸಲಾಗಿದೆ. ತನಿಖೆ ನಡೆಯುತ್ತಿದ್ದು, ವರದಿ ಬರಲಿ. ಈ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಇಂದು ಮಾಧ್ಯಮದವದೊಂದಿಗೆ ಮಾತನಾಡಿದ ಅವರು, ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ. ಈ ಪ್ರಕರಣದಲ್ಲಿ ನಮ್ಮವರು ಶಾಮೀಲಾಗಿರುವುದು ಕಂಡುಬಂದರೇ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈಗ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಒಂದಿಬ್ಬರು ಕಾಪಿ ಮಾಡಿರಬಹುದು. ಕೆಲವು ಕಡೆ ಬ್ಲೂಟೂತ್ ಬಳಕೆಯಾಗಿದೆ. ಕಲಬುರಗಿ ಮಾತ್ರ ಅಲ್ಲದೇ ಯಾದಗಿರಿ, ವಿಜಯಪುರ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿಯೂ ಕೂಡಾ ಇಂತಹ ಘಟನೆ ನಡೆದಿವೆ. ಇದರ ಲೋಪಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯಾವುದೇ ಪ್ರಕರಣ ಆದರೂ ಅದರ ಗಾಂಭೀರ್ಯತೆ ತಿಳಿದುಕೊಂಡು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಒಎಂಆರ್ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದಿಲ್ಲ, ಬೇರೆ ಕಡೆ ನಡೆದಿದೆ. ಒಎಂಆರ್ ಹೊರಗಡೆ ಬಂದಿದೆ ಎಂದರೆ ಯಾರಾದರೂ ಮೊಬೈಲ್ ಬಳಸಿರಬಹುದು. ಇದು ರಾಜ್ಯದ ಬೇರೆ ಬೇರೆ ಕಡೆ ನಡೆದಿದೆ. ಹಾಗಾಗಿ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ. ಅದರ ವರದಿ ಆಧರಿಸಿ ಪ್ರಕರಣವನ್ನು ಸಿಒಡಿಗೆ ಅಥವಾ ಸಿಬಿಐಗೆ ಕೊಡುವ ಕುರಿತು ಗೃಹ ಸಚಿವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಆ ಬಗ್ಗೆ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಆರೋಪ : ಆರ್.ಡಿ ಪಾಟೀಲ್ ಗೆ ಪ್ರಿಯಾಂಕ್ ಖರ್ಗೆ ಅವರ ಶ್ರೀರಕ್ಷೆ ಇದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಟಾಂಗ್ ನೀಡಿದ ಸಚಿವರು, ಈ ಹಿಂದೆ ಪಿಎಸ್ಐ ಪರೀಕ್ಷೆ ನಡೆದಾಗ ಯಾವ ಸಂಸದರು ಶಾಲೆಯೊಂದರಲ್ಲೇ ಪರೀಕ್ಷೆ ನಡೆಯಬೇಕು ಪತ್ರ ಬರೆದಿದ್ದರು. ಶಾಸಕರ ಭವನದಲ್ಲೇ ಡೀಲ್ ಮಾಡಿದ್ದರು. ಅಂದಿನ ಗೃಹ ಸಚಿವರು ಆರೋಪಿತರ ಮನೆಗೆ ಹೋಗಿ ಗೋಡಂಬಿ, ಚಹಾ ಸೇವನೆ ಮಾಡಿದ್ದರು. ಮಾಜಿ ಸಚಿವರೊಬ್ಬರು ಆರೋಪಿಗಳ ಬಂಧನವಾದಾಗ ಬಿಡುಗಡೆ ಮಾಡಲು ಕೋರಿದ್ದರು. ಈಗ ನನ್ನ ಹಾಗು ನಮ್ಮ ಶಾಸಕರ ಬಗ್ಗೆ ಅನುಮಾನಗಳಿದ್ದರೆ ಬಿಜೆಪಿ ದಾಖಲೆ ನೀಡಲಿ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ, ಜೊತೆಗೆ ಆಳವಾಗಿ ಅಧ್ಯಯನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಯುವಕರ ಭವಿಷ್ಯದ ಕುರಿತು ಸರ್ಕಾರಕ್ಕೆ ಬದ್ಧತೆ ಇದೆ. ಈ ಹಿಂದೆ ಅಂತಿಮ ಪಟ್ಟಿ ಪ್ರಕಟಣೆ ಆದ 7 ತಿಂಗಳ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿತ್ತು. ಆದರೆ ಈಗ ಇಲ್ಲಿ ಹಾಗಾಗಿಲ್ಲ. ಯುವಕರ ಭವಿಷ್ಯಕ್ಕಾಗಿ Prevention of Corruption in Government Recruitment (ಸರ್ಕಾರಿ ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆ) ಬಿಲ್ ತಯಾರಿಸುತ್ತಿದ್ದೇವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಬಿಲ್ ಮೂವ್ ಮಾಡಿದ್ದೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗಿದೆ. ಅದನ್ನು ಈಗಾಗಲೇ ಕಾನೂನು ಸಚಿವರ ಒಪ್ಪಿಗೆ ನಂತರ ಡಿಪಿಆರ್ ಗೆ ಕಳಿಸಿದ್ದಾರೆ. ಸಿಎಂ ಅವರು ಡಿಪಿಆರ್ ತರಿಸಿಕೊಂಡು ಮಂಜೂರು ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.