ಕಲಬುರಗಿ:FDA ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾನೆ. 'ದಾಖಲೆ ಇದ್ದರೆ ಕೊಡ್ರೋ, ಸುಮ್ಮನೆ ಹೇಳೋದಲ್ಲ' ಎಂದು ಆರೋಪಿ ಹೇಳಿದ್ದಾನೆ. ಅಶೋಕ ನಗರ ಪೊಲೀಸ್ ಠಾಣೆಯಿಂದ ಸ್ಪಾಟ್ ಮಹಜರ್ಗೆ ಪೊಲೀಸರು ಕರೆದೊಯ್ಯುವ ವೇಳೆ ಆರ್ ಡಿ ಅಹಂಕಾರ ತೋರಿದ್ದಾನೆ. ಪೊಲೀಸರ ಎದುರೇ ಮಾಧ್ಯಮದವರಿಗೆ 'ದಾಖಲೆ ಇದ್ದರೆ ಕೊಡ್ರೋ, ಸುಮ್ಮನೆ ಹೇಳೋದಲ್ಲ' ಎಂದಿದ್ದಾನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಪರೀಕ್ಷೆಯಲ್ಲಿ ಪಾಟೀಲ್ ಅಕ್ರಮ ಎಸೆಗಿರುವ ಆರೋಪ ಎದುರಿಸುತ್ತಿದ್ದು, ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಕೆಇಎ ಪರೀಕ್ಷೆ ಅಕ್ರಮ ಪ್ರಕರಣ - ಸಿಐಡಿ ತನಿಖೆಗೆ:ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧೆಡೆ ನಡೆದ ಅಕ್ರಮ ಬ್ಲೂಟೂತ್ ಡಿವೈಸ್ ಬಳಕೆಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಅಫಜಲಪುರ ಠಾಣೆಯಲ್ಲಿ ಐಪಿಸಿ 109, 114, 120 ಬಿ ಸೇರಿದಂತೆ ಇತರೆ ಸೆಕ್ಷನ್ ಅಡಿ ದಾಖಲಾದ ಕ್ರೈಮ್ ನಂ.267/2023 ಪ್ರಕರಣವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಐಡಿ ತನಿಖೆಗೆ ಒಪ್ಪಿಸುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರ ಅವರು ಸೂಚಿಸಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ಬ್ಲೂಟೂತ್ ಬಳಕೆ ಕುರಿತಾಗಿ ರಾಜ್ಯದ ಎಂಟು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದ ಬಳಿಕ ಪ್ರಕರಣದ ಪ್ರಮುಖ ಹಾಗೂ ಇತರ ಆರೋಪಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.