ಕಲಬುರಗಿ:ಅನಧಿಕೃತ ಕಾಲ್ ಸೆಂಟರ್ ತೆರೆದು ದೂರವಾಣಿ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರವಾಗಿ ಮತಯಾಚನೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಐಟಿ ಸೆಂಟರ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ನಗರದ ಹೊರವಲಯದಲ್ಲಿರುವ ಐಟಿ ಪಾರ್ಕ್ ಕಿಯೋನಿಕ್ಸ್ ಸರ್ಕಾರಿ ಸ್ವಾಮ್ಯದ ಕಟ್ಟಡದಲ್ಲಿ ಇನ್ಫೋಥಿಂಕ್ ಟೆಕ್ನಾಲಜಿಸ್ ಹೆಸರಿನ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಇದೆ ಕಚೇರಿಯಿಂದ ಟೆಲಿಕಾಲರ್ ಗಳ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ಗೆ ಮತ ಹಾಕುವಂತೆ ದೂರವಾಣಿ ಕರೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ಫೋಥಿಂಕ್ ಟೆಕ್ನಾಲಜಿಸ್ ಸೆಂಟರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ಮಾಡಿದ್ದು, ದಾಳಿ ವೇಳೆ ನೂರಾರು ಯುವತಿಯರು ಇಲ್ಲಿ ಕೆಲಸ ಮಾಡುವುದು ಪತ್ತೆಯಾಗಿದೆ.
ಟೆಲಿಕಾಲಿಂಗ್ ಅಗತ್ಯವಾದ ಯಂತ್ರೋಪಕರಣಗಳು ಹಾಗೂ ಸಾರ್ವಜನಿಕರ ಮೊಬೈಲ್ ನಂಬರ್ ಮಾಹಿತಿಯುಳ್ಳ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಇನ್ನು ದಾಳಿ ನಂತರ ಯುವತಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕಚೇರಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಸದ್ಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನು ಇದೆ ರೀತಿ ಅನಧಿಕೃತವಾಗಿ ನಗರದ ಸನ್ ಸಿಟಿ ಮಾಲ್ನಲ್ಲಿ ಟೆಲಿಕಾಲಿಂಗ್ ದಂಧೆ ನಡೆಯುತ್ತಿದೆ ಎಂಬ ಆರೋಪಕೇಳಿ ಬಂದಿದೆ. ಈ ಆಧಾರದ ಮೇಲೆ ಅಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.