ಕಲಬುರಗಿ:ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಜೇವರ್ಗಿ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಶಾಂತಗೌಡ ಬಿರಾದಾರ ಅವರ ಗುಬ್ಬಿ ಕಾಲೋನಿಯ ಮನೆ, ತೋಟದ ಮನೆ, ಜೇವರ್ಗಿಯಲ್ಲಿನ ಕಚೇರಿ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ರಾತ್ರಿ 8 ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ, ಡ್ರೈನೇಜ್ ಪೈಪ್‌ನಲ್ಲೂ ಕೂಡ ಹಣದ ಕಂತೆ, ವಾಲ್ ಸೀಲಿಂಗ್ನಲ್ಲಿ ಬಚ್ಚಿಟ್ಟಿದ್ದ ಹಣದ ಕಂತೆ ಸೇರಿ 54 ಲಕ್ಷ ರೂ. ನಗದು ಒಳಗೊಂಡಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು.
ಇದನ್ನೂ ಓದಿ:Kalaburagi ACB Raid: ಡ್ರೈನೇಜ್ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್ಗೆ ಎಸಿಬಿ ಅಧಿಕಾರಿಗಳೇ ದಂಗು
ಹೆಚ್ಚಿನ ತನಿಖೆಗೆ ಸಹಕಾರ ನೀಡದ ಕಾರಣ ನಿನ್ನೆ ರಾತ್ರಿ ಶಾಂತಗೌಡ ಅವರನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಆದರೆ ಜೈಲಿಗೆ ಹೋಗುತ್ತಿದ್ದಂತೆ ಶಾಂತಗೌಡ ಬಿರಾದರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಭಯದಿಂದ ಗಾಬರಿಗೊಂಡ ಹಿನ್ನೆಲೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದ್ಯ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್ಗೆ ಅವರನ್ನು ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಂತಗೌಡಗೆ ಸಂಬಂಧಿಸಿದ ಬ್ಯಾಂಕ್ ಲಾಕರ್ ಕುರಿತಂತೆ ಅಧಿಕಾರಿಗಳು ಕಲಬುರಗಿ ಹಾಗೂ ಜೇವರ್ಗಿ ಎಸ್ಬಿಐ ಬ್ಯಾಂಕ್ಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಬಳಿ ರಸ್ತೆ ಅಪಘಾತ.. 3 ದಿನದ ಹಿಂದೆ ಮದುವೆ, ವರ ಸಾವು, ವಧು ಸ್ಥಿತಿ ಗಂಭೀರ!