ಕಲಬುರಗಿ: ಜಿಲ್ಲಾ ಆಯುಷ್ ಅಧಿಕಾರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಜಿಲ್ಲಾ ಆಯುಷ್ ಅಧಿಕಾರಿ ಡಾ.ನಾಗರತ್ನ ಚಿಮ್ಮಲಗಿ ಎಸಿಬಿ ಪೊಲೀಸರ ಬಲೆಗೆ ಬಿದ್ದ ಅಧಿಕಾರಿ. ಇವರು ತಮ್ಮ ಕಚೇರಿ ಕೆಲಸದ ನಿಮಿತ್ತ ಟೆಂಡರ್ ಮೂಲಕ ಕನಿಷ್ಕ ಧನ್ನಿ ಎಂಬುವರಿಂದ ಟಾಟಾ ಇಂಡಿಕಾ ಕಾರ್ ಬಾಡಿಗೆ ಪಡೆದು ತಿಂಗಳಿಗೆ 28,050 ರೂ.ಮೊತ್ತದ ಚಕ್ ಪಾವತಿಸುತ್ತಿದ್ದರು.
ಅದರಂತೆ ಜೂನ್ ಮತ್ತು ಜುಲೈ ತಿಂಗಳ ಕಾರ್ ಬಾಡಿಗೆ ಬಿಲ್ ಪಾವತಿಸಲು ಡಾ.ನಾಗರತ್ನಾ 6,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಬೇಡಿಕೆಯಂತೆ ಇಂದು ಹಣ ನೀಡಲು ಬಂದಾಗ ತಮ್ಮ ಕಚೇರಿ ಜವಾನ ಅರುಣಕುಮಾರ ಎಂಬಾತನ ಕೈಗೆ ಹಣ ನೀಡಲು ಅಧಿಕಾರಿ ನಾಗರತ್ನಾ ತಿಳಿಸಿದ್ದಾರೆ.
ಹಣ ನೀಡುವಾಗ ದಿಢೀರ್ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಜವಾನ ಅರುಣಕುಮಾರ ಹಾಗೂ ಡಾ. ನಾಗರತ್ನಾ ಈ ಇಬ್ಬರನ್ನೂ ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಈಶಾನ್ಯ ವಲಯ ಪೊಲೀಸ್ ಅಧೀಕ್ಷಕಿ ವಿ.ಎಂ. ಜ್ಯೋತಿ ಅವರ ಮಾರ್ಗದರ್ಶನದಲ್ಲಿ, ಎಸಿಬಿ ಡಿ.ಎಸ್‍ಪಿ ಸುಧಾ ಆದಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ ಇಸ್ಮಾಯಿಲ್ ಶರೀಫ್ ಹಾಗೂ ಸಿಬ್ಬಂದಿರವರು ಕಾರ್ಯಾಚರಣೆ ನಡೆಸಿದ್ದಾರೆ.