ಕಲಬುರಗಿ:ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಯುವಕನನ್ನು ಕೊಲೆಗೈದು ಶಾಲೆಯ ಆವರಣದಲ್ಲಿ ಶವ ಬಿಸಾಡಿದ ಘಟನೆ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸಂತೋಷ್ ಹೆಗಡೆ (24) ಕೊಲೆಯಾದ ಯುವಕ. ಸಂತೋಷನ ಕತ್ತು ಹಿಸುಕಿ ಕೊಲೆ ಮಾಡಿ ಶಾಲೆ ಆವರಣದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃಷಿ ಕಾಯಕ ಮಾಡುತ್ತಿದ್ದ ಸಂತೋಷ್ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಮಹಿಳೆಯೊಂದಿಗೆ ಅತಿ ಸಲುಗೆ ಬೆಳೆಸಿಕೊಂಡಿದ್ದ, ವಾಟ್ಸಪ್ ಚಾಟ್ ಮಾಡೋದು, ಮಾತಾಡೋದು ಮಾಡುತ್ತಿದ್ದನಂತೆ. ಇದೇ ಕಾರಣಕ್ಕೆ ವಿವಾಹಿತ ಮಹಿಳೆಯ ಸಹಾಯದೊಂದಿಗೆ ಆಕೆ ಕಡೆಯವರು ಕೊಲೆಗೈದಿದ್ದಾರೆಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುದ್ದಿ ತಿಳಿದ ನೆಲೋಗಿ ಠಾಣೆ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಕೊಲೆಯಾದ ಸಂತೋಷ್ ಕುಟುಂಬದವರು ಮಹಿಳೆಯ ವಿರುದ್ಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೈಕ್ ಕಳ್ಳತನ ಸಿಸಿಟಿವಿಯಲ್ಲಿ ಕಳ್ಳನ ಕೈಚಳ ಸೇರೆ:ಕಲಬುರಗಿ ನಗರದ ದೇವಿನಗರ ಬಡಾವಣೆಯಲ್ಲಿ ಬೈಕ್ ಕಳ್ಳತನವಾಗಿದೆ. ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಕಳ್ಳನ ಕೈಚಳಕ ಸೇರೆಯಾಗಿದೆ. ಚನ್ನಬಸಪ್ಪ ಯಂಪಳ್ಳಿ ಎಂಬುವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳ್ಳತನ ಆಗಿದೆ. ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.