ಕಲಬುರಗಿ:ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಜೈಲು ಸೇರಿದ್ದ ಯುವಕ, ಜಾಮೀನು ಪಡೆದು ಮದುವೆ ಆಗುವುದಾಗಿ ಯುವತಿಗೆ ಒಪ್ಪಿಸಿ ಜೈಲಿಂದ ಹೊರ ಬಂದು ಮತ್ತೇ ವಂಚಿಸಿದ್ದು, ಆತನ ವಿರುದ್ಧ ಯುವತಿ ಮತ್ತೊಮ್ಮೆ ದೂರು ದಾಖಲಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಚಿತ್ತಾಪುರ ತಾಲೂಕಿನ ರಾಮತೀರ್ಥದ ರಾಘವೇಂದ್ರ ರೆಡ್ಡಿ ಎಂಬಾತ ಮತ್ತೆ ಮೋಸ ಮಾಡಿದ್ದಾನೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಘಟನೆಯ ವಿವರ: ಈ ಹಿಂದೆ ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಸಹ ಜೀವನ ಕಳೆದು ನಂತರ ಮದುವೆ ಮುಂದುಡುತ್ತಾ ಬಂದಿದ್ದ. ಇದನ್ನು ಕಂಡ ಯುವತಿ ಮನೆಯವರು ವಿಜಯಪುರದ ಬೇರೊಬ್ಬ ಯುವಕನೊಂದಿಗೆ ಆಕೆಗೆ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಆದರೆ, ಈ ವಿಚಾರ ರಾಘವೇಂದ್ರನಿಗೆ ತಿಳಿದು ಯುವತಿ ಜೊತೆಗೆ ಇದ್ದಾಗ ತೆಗೆದ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಕಳುಹಿಸಿ ಅವರ ಸಂಬಂಧ ಮುರಿದಿದ್ದ. ತಾನೂ ಮದುವೆಯಾಗಲು ಒಪ್ಪದೇ, ಬೇರೊಬ್ಬ ಯುವಕನ ಜೊತೆಗೂ ಮದುವೆಯಾಗಲು ಬಿಡದೆ ರಾಘವೇಂದ್ರ ತನ್ನ ಬಾಳನ್ನೇ ಹಾಳು ಮಾಡುತ್ತಿದ್ದಾನೆ ಎಂದು ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.