ಕಲಬುರಗಿ: ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ಸಿದ್ದು ಕೆರಮಗಿ (36) ಎಂಬಾತ ಶನಿವಾರ ಶವವಾಗಿ ಪತ್ತೆಯಾಗಿದ್ದು, ಅಂತ್ಯಕ್ರಿಯೆಗೂ ಮುಂಚೆಯೇ ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ವಿತರಿಸಲಾಯಿತು.
ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿತ್ತು. ಈ ವೇಳೆ ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದ ಟಂಟಂ ವಾಹನ ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ಹೊರಟಿತ್ತು. ಆದರೆ, ಜೋರಾದ ಮಳೆಗೆ ಹಳ್ಳ ತುಂಬಿದರಿಂದ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.
ಟ್ರ್ಯಾಕ್ಟರ್ ಚಾಲಕ ಕಂಟಿಯೊಂದನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದ. ಆದರೆ, ಟ್ರ್ಯಾಕ್ಟರ್ನಲ್ಲಿದ್ದ ಸಿದ್ದು ಕೆರಮಗಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಇತನ ಪತ್ತೆಗಾಗಿ ಶುಕ್ರವಾರ ರಾತ್ರಿಯಿಡೀ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.