ಕಲಬುರಗಿ:ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂಬ ಆರೋಪದ ಹಿನ್ನೆಲೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಶಹಾಬಾದ್ ಬಳಿ ನಡೆದಿದೆ.
ವಿವಾಹೇತರ ಸಂಬಂಧಕ್ಕೆ ಪ್ರಾಣತೆತ್ತ ವ್ಯಕ್ತಿ ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ನಿವಾಸಿ ಜಗದೀಶ (32) ಕೊಲೆಯಾದ ವ್ಯಕ್ತಿ. ಜಗದೀಶ ಕೂಡಾ ವಿವಾಹಿತನಾಗಿದ್ದು, ಪಕ್ಕದ ಮನೆಯ ಅನ್ಯ ಕೋಮಿನ ವಿವಾಹಿತ ಮಹಿಳೆಯೊಂದಿಗೆ ಸುಮಾರು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಜಗದೀಶ ತನ್ನ ಬೈಕ್ ಮೇಲೆ ಆ ಮಹಿಳೆಯನ್ನು ಕರೆದುಕೊಂಡು ಹೋಗುವುದನ್ನು ಗಮನಿಸಿದ ಕೇಲ ಕಿಡಗೇಡಿಗಳು ಶಹಾಬಾದ್ ಬಳಿ ಬೈಕ್ ಅಡ್ಡಗಟ್ಟಿ ಆತನಿಗೆ ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಗದೀಶನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ಅರಿತ ಎಸ್ಪಿ ಯಡಾ ಮಾರ್ಟಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಿಳೆಯ ಸಂಬಂಧಿಕರೇ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.