ಕಲಬುರಗಿ: ಕ್ಷುಲ್ಲಕ ಕಾರಣಕ್ಕಾಗಿ 6 ಜನರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬರ್ಬರವಾಗಿ ಇರಿದು ಯುವಕನೊಬ್ಬನ ಕೊಲೆ ಮಾಡಿದ ಘಟನೆ ನಗರದ ಅಜಾದಪೂರ ಮಾರ್ಗದ ಹುಂಡೇಕಾರ ಕಾಲೋನಿಯಲ್ಲಿ ನಡೆದಿದೆ.
ಇಲ್ಲಿಯ ಮಿಲನ್ ನಗರದ ಬಂದೇನವಾಜ್ ಮಜೀದ್ ಹತ್ತಿರದ ನಿವಾಸಿ ಬಾಬಾಖಾನ್ ತಂದೆ ಸಿರಾಜ (26) ಎಂಬಾತನೇ ಕೊಲೆಯಾಗಿದ್ದು, ಇದೇ ಬಡಾವಣೆಯ ನಿವಾಸಿಗಳಾದ ಇಬ್ರಾಹಿಮ್ ತಂದೆ ಇಮಾಮಾಲಿ (25) ಹಾಗೂ ಮೊಯೀನ್ ಹಲ್ಲೆಗೊಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಂಡೇಕಾರ ಕಾಲೋನಿಯ ನಿವಾಸಿ ಸೈಫನ್ ಅಲಿಖಾನ, ಈತನ ತಂದೆ ಶೌಕತ್ ಹಾಗೂ ಮೂವರು ಸಹೋದರರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಬಾಬಖಾನ್, ಸ್ನೇಹಿತರಾದ ಇಬ್ರಾಹಿಮ್ ಹಾಗೂ ಮೊಯಿನ್ ಮೂವರು ಸೇರಿ ಮದುವೆ ಸಮಾರಂಭಕ್ಕೆ ಹೋಗಿದ್ದರು. ಅಲ್ಲಿಂದ ಬೈಕ್ ಮೇಲೆ ರಾತ್ರಿ 10 ಗಂಟೆಗೆ ಸುಮಾರಿಗೆ ಮನೆಗೆ ಹೋಗುತ್ತಿದ್ದ ವೇಳೆ ಹುಂಡೇಕಾರ ಕಾಲೋನಿಯ ಬಳಿ ಆರೋಪಿ ಸೈಫನ್ ಹಾಗೂ ಆತನ ಸ್ನೇಹಿತ ಸಲ್ಮಾನ್ ಇಬ್ಬರು ಕುಳಿತಿದ್ದರು.
ಈ ವೇಳೆ, ಹಳೆಯ ವೈಷಮ್ಯದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆರೋಪಿ ಸೈಫನ್ ಫೋನ್ ಮಾಡಿ ತನ್ನ ತಂದೆ ಶೌಕತ್ ಹಾಗೂ ಮೂವರು ಸಹೋದರರಿಗೆ ಸ್ಥಳಕ್ಕೆ ಕರೆಸಿದ್ದಾನೆ. ಅವರು ಬಂದವರೇ ಬಾಬಖಾನ್, ಇಬ್ರಾಹಿಮ್ ಹಾಗೂ ಮೊಯಿನ್ ಮೂವರ ಮೇಲೆ ಹಲ್ಲೆ ಮಾಡಿದ್ದು, ಸೈಫನ್ ಬಾಬಾಖಾನ ಎದೆಗೆ, ಕೈಗಳಿಗೆ ಇತರ ಕಡೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಗಾಯಾಳು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಬಾಖಾನ್‌ಗೆ ಇಬ್ರಾಹಿಮ್ ಹಾಗೂ ಆತನ ಸ್ನೇಹಿತರು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು, ಬಾಬಖಾನ್ ಮಾರ್ಗಮಧ್ಯದಲ್ಲಿಯೇ ಮತಪಟ್ಟಿದ್ದಾನೆ. ಈ ಕುರಿತು ಸುದ್ದಿ ಅರಿತ ಸಿಪಿಐ ದೀಪನ್, ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿವಿಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ದೇವಸ್ಥಾನಗಳಿಗೆ ಕನ್ನಹಾಕುತ್ತಿದ್ದ ಮೂವರ ಬಂಧನ:ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ದೇವರಿಗೆ ಅಲಂಕಾರಿಕ ಚಿನ್ನದ ಒಡವೆ, ಬೆಳ್ಳಿಯ ಮುಖವಾಡ, ಹುಂಡಿಗಳನ್ನು ಕದ್ದು ಪರಾರಿಯಾಗ್ತಿದ್ದ ಖತರ್ನಾಕ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಸೇರಿ ಇಬ್ಬರು ಹಾಗೂ ಆಳಂದ ತಾಲೂಕಿನ ನಿಂಬರ್ಗಾ ಶರಣಬಸವೇಶ್ವರ ದೇವಸ್ಥಾನದ ಬೆಳ್ಳಿಯ ಎರಡು ಮುಖ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 2022 ರ ಡಿಸೆಂಬರ್ 29 ರಂದು ಮಧ್ಯರಾತ್ರಿ ಭಾಗ್ಯವಂತಿ ದೇಗುಲಕ್ಕೆ ನುಗ್ಗಿದ ಕಳ್ಳರು ಗರ್ಭ ಗುಡಿಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಓರ್ವ ಮಹಿಳೆ ಸೇರಿ ಮೂವರು ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೇರೆ ಆಗಿತ್ತು. ದೃಶ್ಯದ ಆಧಾರದ ಮೇಲೆ ಪೊಲೀಸರು ಕಳ್ಳರನ್ನು ಪತ್ತೆ ಮಾಡಿ ಜೈಲಿಗೆ ಅಟ್ಟಿದ್ದಾರೆ. ಬಂಧಿತರಿಂದ 65 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಹಚರರಿಂದಲೇ ಹತ್ಯೆಯಾದ ರೌಡಿಶೀಟರ್; ಸಿಸಿಟಿವಿ ಕ್ಯಾಮರಾದಲ್ಲಿ ವಿಡಿಯೋ ಸೆರೆ