ಕಲಬುರಗಿ:ಕಡು ಬಡತನದಲ್ಲಿ ಜನಿಸಿ, ಮಗುವಿದ್ದಾಗಲೇ ಎಲ್ಲರನ್ನೂ ಕಳೆದುಕೊಂಡು, ಹುಟ್ಟಿನಿಂದ ಹೋರಾಟದ ಹಾದಿಯಲ್ಲಿಯೇ ಬೆಳೆದು ಬಂದ ಡಾ. ಮಲ್ಲಿಕಾರ್ಜುನ ಖರ್ಗೆ ಈಗ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜೀವನದ ಬಹುತೇಕ ಸಮಯ ಮುಳ್ಳಿನ ಹಾದಿಯಲ್ಲಿ ನಡೆದು ಯಶಸ್ವಿ ಜೀವನದತ್ತ ಬಂದಿರುವ ಖರ್ಗೆ ಕೈಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಲು ಗಾಂಧಿ ಕುಟುಂಬ ಮುಂದಾಗಿದೆ.
ಹೌದು, ದೇಶದ ಅತಿ ಹಳೆಯದಾದ ಮತ್ತು ಅತಿ ದೊಡ್ಡದಾಗ ಕಾಂಗ್ರೆಸ್ ಪಕ್ಷದ ಆಡಳಿತ ಚುಕ್ಕಾಣಿ ಹಿರಿಯ ರಾಜಕೀಯ ಮುತ್ಸದ್ಧಿ ಖರ್ಗೆ ಕೈಗೆ ಸಿಕ್ಕಿದೆ. ದೇಶದ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದು ಭರ್ಜರಿ ಗೆಲುವಿನ ಮೂಲಕ ಎಐಸಿಸಿ ಸಾರಥಿ ಆಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಹರಿಕಾರ, ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಖರ್ಗೆ ಅವರ ಹಿಂದಿನ ಜೀವನ ಮಾತ್ರ ಹೂವಿನಿಂದ ಕೂಡಿದ ಮೆತ್ತನೆಯ ಹಾದಿಯಾಗಿರಲಿಲ್ಲ ಅನ್ನೋದು ಗಮನಾರ್ಹ ವಿಷಯ.
ಪುಟ್ಟ ಕಂದಮ್ಮನ ಕರಾಳ ದಿನ: ರಾಜಕೀಯದಲ್ಲಿ ಸೋಲಿಲ್ಲದ ಸರ್ದಾರ ಎಂಬ ಖ್ಯಾತಿ ಪಡೆದ ಮಲ್ಲಿಕಾರ್ಜುನ ಖರ್ಗೆ, ಹುಟ್ಟುತ್ತಲೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ, ಕಡುಬಡತನ ಮನೆಯಲ್ಲಿ ಜನಿಸಿ ಸಾಕಷ್ಟು ನೋವು ನಷ್ಟ ಕಷ್ಟ ಅನುಭವಿಸಿದವರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಕಡು ಬಡತನದ ಮನೆಯಲ್ಲಿ ಜುಲೈ 21,1942 ರಲ್ಲಿ ಜನಿಸಿದ ಖರ್ಗೆ, ಮಗು ಇದ್ದಾಗಲೇ ದುಷ್ಟರ ದುಷ್ಕೃತ್ಯದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡು ತಂದೆಯೊಂದಿಗೆ ಕಲಬುರಗಿಗೆ ಒಲಸೆ ಬಂದಿದ್ದಾರೆಂಬ ಕರಾಳ ಇತಿಹಾಸ ಕೆಲವೆಡೆ ಉಲ್ಲೇಖವಿದೆ.
1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು. ಆದರೆ ನಿಜಾಮನ ಕಪಿಮುಷ್ಠಿಯಲ್ಲಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶ ಒಂದು ವರ್ಷ ತಡವಾಗಿ ಭಾರತದಲ್ಲಿ ವಿಲೀನಗೊಂಡಿತ್ತು. ನಿಜಾಮ ಆಡಳಿತ ಅವಧಿಯಲ್ಲಿ ನಿಜಾಮನ ಖಾಸಗಿ ಸೈನ್ಯ ರಜಾಕಾರರ ಪಡೆ ನಡೆಸಿದ ದಾಳಿ ಅಷ್ಟಿಷ್ಟಲ್ಲ, ಕ್ರೌರ್ಯ ಮನೋಭಾವದ ರಜಾಕರರ ದಾಳಿಯಿಂದ ಈ ಪ್ರದೇಶದಲ್ಲಿ ಅಸಂಖ್ಯಾತ ಜನರು ಪ್ರಾಣ ಕಳೆದುಕೊಂಡರು. ಅದೆಷ್ಟೋ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಿದ್ದರು. ಇದೆ ರಜಾಕರ ದಾಳಿ ಸಂದರ್ಭದಲ್ಲಿ ಖರ್ಗೆ ಕುಟುಂಬ ಕೂಡಾ ನಲುಗಿ ಹೋಗಿತ್ತು. ರಜಾಕರ ಪಡೆ ಖರ್ಗೆ ಅವರ ಇಡೀ ಕುಟುಂಬ ಸದಸ್ಯರನ್ನು ಬಲಿ ಪಡೆದಿದೆ ಎಂಬ ಇತಿಹಾಸ ಕೆಲವೆಡೆ ಉಲ್ಲೇಖವಿದೆ.
ಮಲ್ಲಿಕಾರ್ಜುನ ಖರ್ಗೆ ಮಗುವಾಗಿದ್ದಾಗ ವರವಟ್ಟಿ ಗ್ರಾಮದಲ್ಲಿ ರಜಾಕರ ಪಡೆ ದಾಳಿ ನಡೆಸಿತ್ತು. ಕೈಗೆ ಸಿಕ್ಕಸಿಕ್ಕವರ ಹತ್ಯೆಗೈದಿತ್ತು. ಮನೆಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿತ್ತು. ಇದೇ ಸಂದರ್ಭದಲ್ಲಿ ಖರ್ಗೆ ಕುಟುಂಬ ವಾಸವಿದ್ದ ಗುಡಿಸಲಿಗೂ ಕೊಳ್ಳಿ ಇಟ್ಟಿತ್ತು. ಖರ್ಗೆ ತಾಯಿ ಹಾಗೂ ಒಡಹುಟ್ಟಿದವರು ಅದೇ ಬೆಂಕಿಗೆ ಬಲಿಯಾದರು. ಅದೃಷ್ಟಕ್ಕೆ ಗುಡಿಸಿಲಿನಿಂದ ಹೊರಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ತಂದೆ ಮಾಪಣ್ಣ ಬದುಕುಳಿದಿದ್ದರು. ನಂತರ ಖರ್ಗೆ ತಮ್ಮ ತಂದೆಯೊಂದಿಗೆ ಕಲಬುರಗಿಗೆ ವಲಸೆ ಬಂದಿದ್ದರು ಎಂಬ ಕರಾಳ ಇತಿಹಾಸ ಕೆಲವೆಡೆ ಉಲ್ಲೇಖಿಸಲಾಗಿದೆ.