ಕಲಬುರಗಿ :ಮೋದಿ, ಶಾ, ಆರ್ಎಸ್ಎಸ್ ಅವರ ಕುತಂತ್ರದಿಂದ ನಾನು ಸೋತಿದ್ದೇನೆಯೇ ಹೊರೆತು ಕಲಬುರಗಿ ಜನ ನನ್ನನ್ನ ಸೋಲಿಸಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದ ಜೈಭವಾನಿ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಸಿದ್ದ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಂದು ವರ್ಷ ನಾಲ್ಕು ತಿಂಗಳ ಬಳಿಕ ನಾನು ಪವಿತ್ರವಾದ ಕಲಬುರಗಿ ಭೂಮಿ ಮೇಲೆ ಕಾಲಿಟ್ಟಿದ್ದೇನೆ. ಕೋವಿಡ್ ಕಾರಣ ಸ್ಥಳೀಯ ಶಾಸಕರು, ಮುಖಂಡರು ಕಲಬುರಗಿಗೆ ಬರಲು ಬೇಡ ಎಂದಿದಕ್ಕೆ ನಾನು ಬರಲು ತಡ ಮಾಡಿದೆ ಎಂದರು.
ಕೋವಿಡ್ ಇಡೀ ದೇಶಕ್ಕಲ್ಲದೆ, ಇಡೀ ವಿಶ್ವಕ್ಕೆ ಕಾಡಿದೆ. ಕೋವಿಡ್ನಿಂದ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ನಾನು ಜನರಿಂದ ದೂರ ಇರುವ ವ್ಯಕ್ತಿ ಅಲ್ಲ. ಕೋವಿಡ್ ಕಾರಣದಿಂದ ದೂರ ಉಳಿಬೇಕಾದ ಅನಿವಾರ್ಯತೆ ಎದುರಾಯಿತು. ಜನರ ಆಶೀರ್ವಾದ, ಸಂಪರ್ಕ ಇಲ್ಲದೆ ನಾನು ಬದುಕೋದು ಕಷ್ಟ. ಕಲಬುರಗಿಯ ಜನ ನನ್ನ 11 ಬಾರಿ ಗೆಲ್ಲಿಸಿದ್ದಾರೆ. ಯಾವುದೋ ಕಾರಣಕ್ಕೆ ನನಗೆ ಸೋಲಾಗಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.
ಪಾರ್ಲಿಮೆಂಟ್ನಲ್ಲಿ ಸೋಲಿಸೋದಾಗಿ ನನಗೆ ವಾರ್ನಿಂಗ್ ಕೊಟ್ಟಿದ್ದರು. ಮೋದಿ, ಶಾ, ಆರ್ಎಸ್ಎಸ್ ಅವರ ಕುತಂತ್ರದಿಂದ ನಾನು ಸೋತಿದ್ದೇನೆ. ನನಗೆ ಕಲಬುರಗಿ ಜನ ಸೋಲಿಸಿಲ್ಲ. ಇವತ್ತು ಸಂವಿಧಾನದ ಹಕ್ಕು ಕಸಿಯಲಾಗ್ತಿದೆ. ಕೇಂದ್ರದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಂತ್ರಿಗಿರಿ ಕೊಟ್ಟಿದ್ದೀವಿ ಅಂತಾ ಹೇಳ್ತಾರೆ. ಆದ್ರೆ, ಮಂತ್ರಿಗಳಿಗೆ ಅಧಿಕಾರ ಕೊಟ್ಟಿಲ್ಲ, ಕೇವಲ ಹೀಗಂತಾ, ಬೋರ್ಡ್ ಹಾಕಿಕೊಂಡು ಓಡಾಡಬೇಕು. ಹೊಸದು ಏನು ಕೋಡೊದಿಲ್ಲ, ಇದ್ದಿದನ್ನು ಕಿತ್ತುಕೊಂಡು ಹೋಗೋದು ಮೋದಿ ಸರ್ಕಾರದ ಕೆಲಸ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಬಿಜೆಪಿ, ಮೋದಿ ಕೇಳ್ತಾರೆ. ನಾವು ಮಾಡಿದ್ದೇವೆ ಅಂತಾ ಇವತ್ತು ನೀವು ಜೀವಂತ ಇದ್ದೀರಿ ಎಂದು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟರು.
ಬಿಜೆಪಿ ಹೆಸರು ಬದಲಿಸುತ್ತಿದೆ ಅಷ್ಟೇ.. :ಈಗ ನರೇಂದ್ರ ಮೋದಿ ಅವರು ಹೊಸ ಆಟ ಆರಂಭಿಸಿದ್ದಾರೆ. ನಾವೇನು ಮಾಡುತ್ತೇವೆ ಅದರ ಹೆಸರನ್ನು ಬದಲಾವಣೆ ಮಾಡ್ತಾ ಹೋಗ್ತಿದ್ದಾರೆ ಅಷ್ಟೇ.. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇತ್ತು. ಇವತ್ತು ತೈಲ ಬೆಲೆ ಏರಿಕೆ ಆಗಿದೆ. ತೈಲ ಬೆಲೆ ಏರಿಕೆಯಿಂದ 7 ವರ್ಷದಲ್ಲಿ 25 ಲಕ್ಷ ಕೋಟಿ ಆದಾಯ ಆಗಿದೆ ಕೇಂದ್ರ ಸರ್ಕಾರಕ್ಕೆ. 1 ಲಕ್ಷ 35 ಸಾವಿರ ಕೋಟಿ ಮಾತ್ರ ಸಾಲ ಇತ್ತು. ಅದನ್ನು ತೀರಿಸಬಹುದಿತ್ತಲ್ಲ, ಅದನ್ನು ಬಿಟ್ಟು ಮೋದಿ ಬರೀ ಸುಳ್ಳು ಹೇಳ್ತಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 7 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಸಾರ್ವಜನಿಕ ಉದ್ಯಮಗಳಲ್ಲಿ ನೌಕರಿಗಳನ್ನು ಕಡಿಮೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗವನ್ನು ಸಂಪೂರ್ಣ ಕಡಿಮೆ ಮಾಡ್ತಿದೆ. ಒಂದೆಡೆ ಉದ್ಯೋಗ ಕೊಡ್ತಿವಿ ಅಂತ್ಹೇಳಿ, ಇನ್ನೊಂದೆಡೆ ಉದ್ಯೋಗ ಕಡಿತ ಮಾಡ್ತಿದ್ದಾರೆ. 3 ಕೋಟಿ ಉದ್ಯೋಗಗಳನ್ನು ಕಡಿತ ಮಾಡಿದೆ ಕೇಂದ್ರ ಸರ್ಕಾರ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.