ಕಲಬುರಗಿ:ನಗರದಲ್ಲಿ ಹಾಡಹಗಲೇ ನಡೆದಿದ್ದ ಯುವಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಾಬು ಜಗಜೀವನರಾಂ ನಗರದ ಅರ್ಜುನ್ ಧರಣಿ, ನಮಿತ್ ಅಲಿಯಾಸ್ ಅಮೀತ ಕಟ್ಟಿಮನಿ ಮತ್ತು ಭವಾನಿಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ-ಚಾಮನಾಳ ರಸ್ತೆಯಲ್ಲಿ ಬಂಧಿಸಲಾಗಿದ್ದು, ಮತ್ತೋರ್ವನನ್ನು ಕಲಬುರಗಿಯಲ್ಲಿ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ನಾಲ್ವರು ಸೇರಿ ಜೂನ್ 12ರಂದು ಐವಾನ್ ಶಾಹಿ ರಸ್ತೆಯಲ್ಲಿ ಬಸವರಾಜ ಆಮಟೆ ಎಂಬಾತನ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬು ಜಗಜೀವನರಾಂ ನಗರದ ಬಸವರಾಜ ಆಮಟೆ ಎಂಬಾತನ ಮೇಲೆ ಈ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬಸವರಾಜನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲ್ಲೆಗೊಳಗಾದ ಬಸವರಾಜ ರೈಲ್ವೆ ನಿಲ್ದಾಣದಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದ. ಈ ಕೊಲೆ ಯತ್ನದ ಪ್ರಮುಖ ಆರೋಪಿ ಅರ್ಜುನ್ ಪಾನಿಪುರಿ ಬಂಡಿ ವ್ಯಾಪರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಹಳೇ ದ್ವೇಷದ ಹಿನ್ನೆಲೆ ಹಾಗೂ ಬಡಾವಣೆಯಲ್ಲಿ ಮೇಲುಗೈ ಸಾಧಿಸುವ ವಿಚಾರವಾಗಿ ಕೊಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ. ಬಂಧಿತರಿಂದ ಎರಡು ಬೈಕ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.