ಕರ್ನಾಟಕ

karnataka

ETV Bharat / state

ಹವಾಮಾನಕ್ಕೆ ತಕ್ಕಂತೆ ಬೆಳೆ.. ಮಿಶ್ರ ಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕಲಬುರಗಿ ರೈತ - ಅಫಜಲಪುರದಲ್ಲಿ ಜಮೀನಿನಲ್ಲಿ ಮಿಶ್ವ ಬೆಳೆ ಬೆಳೆದ ರೈತ

ಕಲಬುರಗಿಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ವಿವಿಧ ತಳಿಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದು, ವಾರ್ಷಿಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

Kn_klb_
ವಿವಿಧ ಬೆಳೆ ಬೆಳೆದು ಲಕ್ಷಾಂತರ ರೂ. ಲಾಭಗಳಿಸುತ್ತಿರುವ ರೈತ

By

Published : Nov 21, 2022, 5:20 PM IST

Updated : Nov 21, 2022, 5:27 PM IST

ಕಲಬುರಗಿ:ಕಾಲಕಾಲಕ್ಕೆ ಮಳೆ ಬರಲ್ಲ, ಮಳೆ ಬಂದರೂ ಹವಮಾನ ವೈಪರೀತ್ಯದಿಂದ ಫಸಲು ಆಗಲ್ಲ, ಉತ್ತಮ ಫಸಲು ಬಂದರೂ ಕೂಡಾ ಬೆಳೆದ ಬೆಳೆಗೆ ಬೆಲೆ ಇರಲ್ಲ. ಹೀಗೆ ಒಂದಲ್ಲ ಒಂದು ಸಮಸ್ಸೆಯಿಂದ ಬೇಸತ್ತ ರೈತರು ಕೃಷಿ ಕಾಯಕ ತೊರೆದು ಪಟ್ಟಣ ಸೇರುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತರು ಹವಾಮಾನಕ್ಕೆ ತಕ್ಕಂತೆ ಕಾಲಕಾಲಕ್ಕೆ ಮಿಶ್ರ ಬೇಸಾಯ ಮಾಡಿ ಕೈತುಂಬಾ ಹಣ ಸಂಪಾದಿಸುವ ಮೂಲಕ ನೆಮ್ಮದಿ‌ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕೈಹಿಡಿದ ಮಿಶ್ರ ಬೇಸಾಯ.. ಹೌದು, ಜಿಲ್ಲೆಯ ಅಫಜಲಪುರ ತಾಲೂಕು ಭೋಗೇನಹಳ್ಳಿಯ ರೈತ ಮೊಹ್ಮದ್ ಲತೀಫ್​ ಪಟೇಲ್ ಇಂತಹದೊಂದು ಸಾಧನೆ‌ ಮಾಡುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ. ಪಟೇಲ್ ತಮ್ಮ 5 ಎಕರೆಯ ಒಟ್ಟು ಜಮೀನಿನ, ಒಂದೂವರೆ ಎಕರೆ ಭೂಮಿಯಲ್ಲಿ ಮಿಶ್ರ ಬೆಸಾಯ ತೆಗೆದು ನೆಮ್ಮದಿಯ ಜೀವನ‌ ಸಾಗಿಸುತ್ತಿದ್ದಾರೆ. ಒಂದುವರೆ ಎಕರೆಯಲ್ಲಿ ಈರುಳ್ಳಿ, ಟೊಮೆಟೊ, ಬೆಂಡೆ, ಸೌತೆ, ತೊಂಡೆಕಾಯಿ, ಮೂಲಂಗಿ, ಕುಂಬಳಕಾಯಿ, ಹಾಗಲಕಾಯಿ ತೋಟಗಾರಿಕೆ ಬೆಳೆ ತೆಗೆಯುತ್ತಿದ್ದಾರೆ. ಇಷ್ಟೇ ಅಲ್ಲದೇ, ಅಂತರ ಬೇಸಾಯವಾಗಿ ಚೆಂಡು ಹೂವು ಬೆಳೆದು ದುಪ್ಪಟ್ಟು ಲಾಭ ಪಡೆಯುತ್ತಿದ್ದಾರೆ.

ರೈತರಿಗೆ ಉತ್ತಮ ಸಲಹೆ.. ಒಂದೇ ಬೆಳೆಗೆ ಕಟ್ಟುಬೀಳದೆ, ಸಮಗ್ರ ಕೃಷಿ ಪದ್ಧತಿಯೊಂದಿಗೆ ಮಿಶ್ರ ಬೆಳೆ ಬೆಳೆಯುವತ್ತ ರೈತರು ಚಿತ್ತ ಹರಿಸಿದರೆ ಕೃಷಿಯಲ್ಲಿ ನಷ್ಟ ಅನ್ನೋದು ಇಲ್ಲದೆ ಲಾಭದಾಯಕ ಆಗಿಸಬಹುದು ಅನ್ನೋದು ರೈತ ಮೊಹ್ಮದ್ ಲತೀಫ್ ಪಟೇಲ್ ಅವರ ಮಾತು. ಒಂದೂವರೆ ಎಕರೆಯಲ್ಲಿ ತೋಟಗಾರಿಕೆ ಬೆಳೆಯಾದರೆ ಉಳಿದ ಜಮೀನಿನಲ್ಲಿ ಸುಗಂಧರಾಜ ಕೃಷಿ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯೊಂದಿಗೆ ತಮ್ಮ ಜಮೀನಿನಲ್ಲೇ ಎರೆಹುಳು ಗೊಬ್ಬರ ತಯಾರಿಕಾ ಘಟಕ, ಎರೆ ಜಲ, ಡಿಕಂಪೋಸರ್, ಜೀವಾಮೃತ ತಯಾರಿಸುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ‌ ಮಾಡುತ್ತಿದ್ದಾರೆ.

ಬಂಡವಾಳವೂ ಕಡಿಮೆ.. ಕಡಿಮೆ ಬಂಡವಾಳ‌ ಹಾಕಿ ಹೆಚ್ಚಿನ ಲಾಭ ತೆಗೆಯಲು ಪ್ರಯತ್ನ ಮಾಡುವ ವಾಣಿಜ್ಯೋದ್ಯಮಿಗಳ ಮಾದರಿಯಲ್ಲಿ ವರ್ಷವಿಡಿ ಆದಾಯ ಬರುವಂತೆ ರೈತ ಲತೀಫ್ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬದಲಾಗುವ ವಾತಾವರಣಕ್ಕೆ ತಕ್ಕಂತೆ ಮಿಶ್ರ ಬೆಳೆ ಬೆಳೆದು, ಸಾವಯವ ಪದ್ಧತಿ ಮೂಲಕ ರೋಗ ಕೀಟಗಳ ನಿರ್ವಹಣೆ ಮಾಡುವ ಲತೀಫ್​ ಅವರ‌ ಕಾರ್ಯಕ್ಕೆ ಕಲಬುರಗಿ ಕೆವಿಕೆ ಹಿರಿಯ ವಿಜ್ಞಾನಿಗಳಾದ ರಾಜು ತೆಗ್ಗಳ್ಳಿ, ಡಾ.ವಾಸುದೇವ ನಾಯಕ್​, ಕೆವಿಕೆ ಸಸ್ಯ ರೋಗ ತಜ್ಞ ಜಹೀರ್ ಅಹ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಲಾ ರೈತರು ಮಿಶ್ರ ತಳಿಯ ಬೆಸಾಯಕ್ಕೆ ಹೆಚ್ಚು ಒತ್ತು ಕೊಟ್ಟರೆ ರೈತರು ಲಾಭ ಪಡೆಯಬಹುದು‌ ಎಂದು ಸಲಹೆ‌ ನೀಡಿದ್ದಾರೆ.

ಇನ್ನು, ರೈತ ಲತೀಫ್ ಅವರ ಮಿಶ್ರ ಬೆಳೆ ಪದ್ಧತಿ ನೋಡಲು ಜಿಲ್ಲೆಯ ಹಲವೆಡೆಯಿಂದ ರೈತರು ಆಗಮಿಸುತ್ತಿದ್ದಾರೆ. ಹೀಗೆ ಬರುವ ರೈತರಿಗೆ ಲತೀಫ್ ಮಿಶ್ರ ಬೆಳೆ, ಸಾವಯುವ ಪದ್ಧತಿ, ಹೈನುಗಾರಿಕೆಯಂತ ಸಲಹೆಗಳನ್ನ ನೀಡುತ್ತಿದ್ದಾರೆ. ಒಟ್ಟಾರೆ ನಾನಾ ರೀತಿಯ ಕೃಷಿ ಪ್ರಯೋಗ ಮಾಡಿ ಯಶಸ್ವಿಯಾಗಿರುವ ಲತೀಫ್ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇವರಂತೆ ಅನ್ನದಾತರು ಆಲೋಚಿಸಿ ಮಿಶ್ರ ಕೃಷಿ ಮಾಡಿದರೆ ಬದುಕು ಹಸನಾಗಿಸಬಹುದು..

ಇದನ್ನೂ ಓದಿ:ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ದಾವಣಗೆರೆ ರೈತ

Last Updated : Nov 21, 2022, 5:27 PM IST

ABOUT THE AUTHOR

...view details