ಕಲಬುರಗಿ: ಮನೆಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿದ ಹುಚ್ಚುನಾಯಿ ಓರ್ವ ಬಾಲಕನಿಗೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿದ ಘಟನೆ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ನಡೆದಿದೆ.
ಕಲಬುರಗಿಯಲ್ಲಿ ಹುಚ್ಚುನಾಯಿ ಹುಚ್ಚಾಟ: ಓರ್ವ ಬಾಲಕನ ಸ್ಥಿತಿ ಗಂಭೀರ - kalaburagi news
ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಬಾಲಕನಿಗೆ ಕಚ್ಚಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ನಾಯಿಯ ದಾಳಿಗೆ ಒಳಗಾದ ಗಂಗರಾಜ ಬಾಗೋಡಿ (5) ಎಂಬ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮುಖ, ತಲೆ ಸೇರಿ ದೇಹದ ಹಲವೆಡೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಶಹಾಬಾದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇನ್ನಿಬ್ಬರು ಮಕ್ಕಳು, ಓರ್ವ ಮಹಿಳೆ ಹಾಗೂ ವ್ಯಕ್ತಿಯ ಮೇಲೆಯೂ ಹುಚ್ಚುನಾಯಿ ದಾಳಿ ಮಾಡಿದೆ. ಗಾಯಾಳುಗಳಿಗೆ ಶಹಾಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಕ್ಕಸಿಕ್ಕವರನ್ನು ಕಚ್ಚಿ ಓಡಿಹೋದ ನಾಯಿಯ ಹುಡುಕಾಟದಲ್ಲಿ ಗ್ರಾಮಸ್ಥರು ತೊಡಗಿದ್ದಾರೆ. ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿದ ಶಹಾಬಾದ ಠಾಣೆ ಪೊಲೀಸರು ನಾಯಿ ಸಿಗುವವರೆಗೂ ಎಚ್ಚರಿಕೆ ವಹಿಸುವಂತೆ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ಅನೌನ್ಸ್ಮೆಂಟ್ ಮಾಡಿದ್ದಾರೆ. ನಾಯಿ ಬೇರೆ ಊರಿಂದ ಬಂದಿದೆ. ಹಿಂದೆಂದು ಅದನ್ನು ನೋಡಿಲ್ಲ, ಗ್ರಾಮದಲ್ಲಿ ಆತಂಕ ಹುಟ್ಟುಹಾಕಿದೆ. ಬಾಲಕನ ಪೋಷಕರು ಬಡವರಾಗಿದ್ದು, ಮಗುವಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಆಗಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.