ಕಲಬುರಗಿ:ವರುಣ ಕೃಪೆ ತೋರಿಸದ ಪರಿಣಾಮ ಬಿತ್ತಿದ ಬೆಳೆ ಮೊಳಕೆ ಬಾರದೆ ನಷ್ಟವಾದ ಹಿನ್ನೆಲೆ ಮನನೊಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಚಿಂಚೋಳಿ ತಾಲೂಕಿನ ದೊಟ್ಟಿಕೊಳ ಗ್ರಾಮದಲ್ಲಿ ನಡೆದಿದೆ.
ಕೃಪೆ ತೋರದ ವರುಣ: ಮನನೊಂದ ರೈತ ಆತ್ಮಹತ್ಯೆಗೆ ಶರಣು - ಕಲಬುರಗಿ ಜಿಲ್ಲೆ
ಉತ್ತರ ಕರ್ನಾಟಕದ ಕೆಲವೆಡೆ ಅತಿವೃಷ್ಟಿಯಿಂದ ಭಾರೀ ಹಾನಿ ಉಂಟಾಗಿದೆ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಬೆಳೆ ನಷ್ಟವಾಗಿದೆ. ಇದರಿಂದ ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಚಿಂಚೋಳಿ ತಾಲೂಕಿನ ದೊಟ್ಟಿಕೊಳ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಪದ್ಮಣ್ಣ ಪೂಜಾರಿ ಆತ್ಮಹತ್ಯೆಗೆ ಶರಣಾದ ರೈತ. ಪದ್ಮಣ್ಣ ಅವರಿಗೆ ಎರಡು ಎಕರೆ ಜಮೀನು ಇದೆ. ಕೃಷಿಗಾಗಿ ಗ್ರಾಮೀಣ ಬ್ಯಾಂಕ್ನಲ್ಲಿ 2 ಲಕ್ಷ ರೂ. ಹಾಗೂ ಖಾಸಗಿಯಾಗಿ 1.50 ಲಕ್ಷ ಸಾಲ ಮಾಡಿಕೊಂಡಿದ್ದರು.
ತಮ್ಮ ಜಮೀನಿನಲ್ಲಿ ಈ ಬಾರಿ ಹೆಸರು ಬಿತ್ತನೆ ಮಾಡಿದ್ದರು. ಆದ್ರೆ ಮಳೆ ಅಭಾವದಿಂದ ಬೆಳೆ ಮೊಳಕೆ ಬಾರದೆ ನಷ್ಟವಾಗಿದೆ. ಮಾಡಿರುವ ಸಾಲ ತಿರಿಸುವುದಾದ್ರೂ ಹೇಗೆ ಎಂದು ಮನನೊಂದ ಬಡ ರೈತ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರೈತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ರಾಜ್ಯ ಸರ್ಕಾರ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.