ಕಲಬುರಗಿ :ನನ್ನ ತಾಯಿಯನ್ನು ಬದುಕಿಸಿಕೊಡಿ ಎಂದು 15 ವರ್ಷದ ಬಾಲಕನೋರ್ವ ಪರದಾಡುತ್ತಿರುವ ಹೃದಯವಿದ್ರಾವಕ ಘಟನೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಆರೋಗ್ಯ ಕರ್ನಾಟಕ ಸ್ಕೀಮ್ ಸಿಬ್ಬಂದಿ ಕೈಚೆಲ್ಲಿದ್ದರಿಂದಾಗಿ ಬಾಲಕ ದಿಕ್ಕುತೋಚದೆ ಕಂಗಾಲಾಗಿದ್ದಾನೆ.ಬೀದರ್ನ ಗುಂಪಾನಗರದ ನಿವಾಸಿ ಶಿವಲಿಂಗಯ್ಯಸ್ವಾಮಿ (ಬಾಲಕನ ತಂದೆ) ಐದು ತಿಂಗಳ ಹಿಂದೆ ಪತ್ನಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರಂಭದಲ್ಲಿ ಮಹಿಳೆಗೆ ಬೀದರ್ನ ಬ್ರೀಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಮೇ 29ರಂದು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, ಸದ್ಯ ಆಸ್ಪತ್ರೆ ಸಿಬ್ಬಂದಿ ಬಿಲ್ ಪಾವತಿಸುವಂತೆ ಹೇಳ್ತಿದ್ದಾರೆ. ಬಿಲ್ ಕಟ್ಟಲು ಬಾಲಕನ ಬಳಿ ಹಣವಿಲ್ಲದ ಕಾರಣ ಆತ ಪರದಾಡುತ್ತಿದ್ದಾನೆ.
ಇತ್ತ ತನ್ನೆರಡು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನನ್ನು ಬದುಕಿಸಿ ಅಂತ ಹೆತ್ತ ಕರುಳು ಹಾಸಿಗೆಯಲ್ಲೇ ಕಣ್ಣೀರು ಹಾಕುತ್ತಿದ್ದಾಳೆ. ಇನ್ನೊಂದು ಕಡೆ ಬಾಲಕ ತನ್ನ ತಾಯಿ ಇಲ್ಲದಿದ್ದರೆ ನಾನು, ನನ್ನ ಸಹೋದರ ಇಬ್ಬರು ಅನಾಥರಾಗ್ತಿವಿ. ದಯವಿಟ್ಟು ನನ್ನ ಅಮ್ಮನನ್ನು ಬದುಕಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ.
ಸದ್ಯ 30 ಸಾವಿರ ರೂಪಾಯಿ ಬಿಲ್ ಪಾವತಿಸುವಂತೆ ಆಸ್ಪತ್ರೆ ಸಿಬ್ಬಂದಿ ದುಂಬಾಲು ಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಬಾಲಕನ ತಾಯಿಯ ಸ್ಥಿತಿ ಹದಗೆಡುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಸಹಾಯ ಮಾಡಲು ಬಯಸುವ ಸಹೃದಯಿಗಳು ಬಾಲಕನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ: 9379379859-ಚೆನ್ನಬಸು