ಕಲಬುರಗಿ : ಕೋವಿಡ್ ಸಂದರ್ಭದಲ್ಲಿ ಶಾಲೆಗಳಿಗೆ ಸಾಲು ಸಾಲು ರಜೆ ನೀಡಿದ್ದ ಪರಿಣಾಮ ಮನೆಯಲ್ಲಿ ಕುಳಿತಿದ್ದ ಬಹುತೇಕ ಮಕ್ಕಳು ಮೊಬೈಲ್ ಬಳಕೆಗೆ ಅಂಟಿಕೊಂಡಿದ್ರು. ಆದ್ರೆ ಇಲ್ಲೊಬ್ಬ ಪೋರ ರಜೆ ಸಮಯ ಸದುಪಯೋಗ ಮಾಡಿಕೊಂಡು ದಾಖಲೆ ಬರೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಮೊದಲು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಪಟ್ಟಿಗೆ ಸೇರಿದ್ದ ಈ ಬಾಲಕ, ಇದೀಗ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಗ್ರಾಂಡ್ ಮಾಸ್ಟರ್ ಎಂಬ ಬಿರುದು ಪಡೆದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾನೆ.
ಹೌದು, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಈ ಬಾಲಕನ ಸಾಧನೆ ಕೂಡ ದೊಡ್ಡದು. ಕಲಬುರಗಿಯ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯೊಂದರಲ್ಲಿ ಎರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಧ್ರುವಂತ್ ಆಲೂರ್ ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ. ಕೇವಲ ಐದು ನಿಮಿಷದಲ್ಲಿ 310 ಇಂಗ್ಲಿಷ್ ಶಬ್ಧಗಳ ಸ್ಪೆಲ್ಲಿಂಗ್ ಅನ್ನು ಅರಳು ಹುರಿದಂತೆ ಹೇಳುವ ಸಾಮರ್ಥ್ಯ ಹೊಂದಿದ್ದಾನೆ. ಎಷ್ಟೇ ವೇಗವಾಗಿ ಶಬ್ಧಗಳನ್ನು ಕೇಳಿದರೂ ಅದೇ ವೇಗದಲ್ಲಿ ಸ್ಪೆಲ್ಲಿಂಗ್ ಪುನರಾವರ್ತನೆ ಮಾಡ್ತಾನೆ. ತನ್ನ ವಿಶೇಷ ಪ್ರತಿಭೆ ಮೂಲಕ 2023 ನೇ ಸಾಲಿನ ಏಷ್ಯಾ ಬುಕ್ ಆಫ್ ರೆಕಾರ್ಡ್ ಪುಸ್ತಕ ಪಟ್ಟಿಗೆ ಸೇರಿದ್ದಾನೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿ, ಗ್ರಾಂಡ್ ಮಾಸ್ಟರ್ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ಮುಂಚೆ ದಕ್ಷಿಣ ಅಂಡಮಾನ್ & ನಿಕೋಬಾರ್ನ ಶಿವಯೋಗಿತ ಐದು ನಿಮಿಷದಲ್ಲಿ 198 ಸ್ಪೆಲ್ಲಿಂಗ್ ಮತ್ತು ತಮಿಳುನಾಡಿನ ರಿಕ್ಷೀತ ಎಂಬ ಪ್ರತಿಭೆಗಳು ಮಾಡಿದ್ದ ರೆಕಾರ್ಡ್ ಅನ್ನು ದ್ರುವಂತ್ ಹಿಂದಿಕ್ಕಿ, ಅದಕ್ಕೂ ಮೀರಿದ ಸಾಧನೆ ಮಾಡಿದ್ದಾನೆ. ಕಳೆದ 2022 ರ ಸಾಲಿನಲ್ಲಿ ಧ್ರುವಂತ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಕೂಡ ಮಾಡಿದ್ದ. ಈಗ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿಯ ಹಿರಿಮೆ ಹೆಚ್ಚಿಸಿದ್ದಾನೆ.
ಧ್ರುವಂತ್ ಸಾಧನೆ ಹಿಂದೆ ಈತನ ತಂದೆ ಕಲಬುರಗಿ ಪಿಡಿಎ ಕಾಲೇಜಿನ ಪ್ರಾಧ್ಯಾಪಕ ರಾಜೀವ್ ಆಲೂರ್ ಹಾಗೂ ತಾಯಿ ಕವಿತಾ ಆಲೂರ್ ಶ್ರಮ ಕೂಡ ಸಾಕಷ್ಟಿದೆ. ಬಾಲಕ ಯುಕೆಜಿಯಲ್ಲಿ ಇದ್ದಾಗ ಅಂಗಡಿಗಳ ನಾಮಫಲಕಗಳನ್ನು ರೀಕಾಲ್ ಮಾಡುತ್ತಿದ್ದನಂತೆ. ಮಗನ ಈ ಪ್ರವೀಣ್ಯತೆ ಹಾಗೂ ಆತನ ನೆನಪಿನ ಸಾಮರ್ಥ್ಯ ಗುರುತಿಸಿದ ತಂದೆ, ಆತನಿಂದ ಏನಾದ್ರೂ ಸಾಧನೆ ಮಾಡಿಸಲು ಮುಂದಾಗಿದ್ರು.