ಕರ್ನಾಟಕ

karnataka

ETV Bharat / state

ಬೇರೆಯವರಿಗೆ ಹೊರೆಯಾಗಬಾರದೆಂದು 15 ವರ್ಷದ ಹಿಂದೆಯೇ ಸಮಾಧಿ ಮಾಡಿಕೊಟ್ಟುಕೊಂಡಿದ್ದ ಅಜ್ಜ... ಅದೇ ಸಮಾಧಿಯಲ್ಲಿ ಕುಟುಂಬಸ್ಥರಿಂದ ಅಂತ್ಯಸಂಸ್ಕಾರ

ಸಾವಿನ ಬಳಿಕ ಹೊರೆಯಾಗಬಾರದೆಂಬ ಕಾರಣಕ್ಕೆ ಕಲಬುರಗಿಯ ಅಜ್ಜನೊಬ್ಬ 15 ವರ್ಷಗಳ ಮೊದಲೇ ತನ್ನ ಸಮಾಧಿಗೆ ಗುಂಡಿ ತೋಡಿ ಇಟ್ಟಿದ್ದು, ಇದೀಗ ಅಜ್ಜನ ನಿಧನ ನಂತರ ಅದೇ ಗುಂಡಿಯಲ್ಲಿ ಅಜ್ಜನ ಮೃತದೇಹವನ್ನು ಸಮಾಧಿ ಮಾಡಲಾಗಿದೆ.

ಸಿದ್ದಪ್ಪ ಅಜ್ಜ ಹಾಗು ಅವರು ಮೊದಲೇ ತೋಡಿದ್ದ ಸಮಾಧಿ
ಸಿದ್ದಪ್ಪ ಅಜ್ಜ ಹಾಗು ಅವರು ಮೊದಲೇ ತೋಡಿದ್ದ ಸಮಾಧಿ

By

Published : Jun 30, 2023, 7:33 AM IST

ಕಲಬುರಗಿ:ತನ್ನ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದೆಂಬ ಉದ್ದೇಶದಿಂದ ಹಾವು ಕಚ್ಚಿದಾಗ ಸಾವಿಗೂ ಮುನ್ನ ಅಜ್ಜಿಯೊಬ್ಬಳು ತನ್ನ ಕೊರಳಲ್ಲಿನ ತಾಳಿ ಬಿಚ್ಚಿಕೊಟ್ಟು ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳುವಂತೆ ಹೇಳಿದ್ದ ಸುದ್ದಿಯೊಂದು ವರದಿಯಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಸುದ್ದಿ ಜನರ ಗಮನ ಸೆಳೆಯುತ್ತಿದೆ. ತೀರಿಕೊಂಡ ಬಳಿಕ ಯಾರಿಗೂ ಹೊರೆ ಆಗೋದು ಬೇಡ ಅಂತ ಅಜ್ಜನೋರ್ವ ಬರೋಬ್ಬರಿ 15 ವರ್ಷಗಳ ಹಿಂದೆಯೇ ಗುಂಡಿ ತೆಗೆದಿದ್ದು, ಈಗ ಅವರನ್ನು ಅದೇ ಗುಂಡಿಯಲ್ಲಿ ಸಮಾಧಿ‌ ಮಾಡಲಾಗಿದೆ.

ವಯೋ ಸಹಜದಿಂದ ಮೃತರಾದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಸಿದ್ದಪ್ಪ ದೇವರನಾವದಗಿ (96) ಎಂಬ ಅಜ್ಜನನ್ನು ಅವರೇ ತೆಗೆದಿದ್ದ ಗುಂಡಿಯಲ್ಲಿ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ. ಕೃಷಿಕನಾಗಿದ್ದ ಅಜ್ಜ ಸಿದ್ದಪ್ಪಗೆ ಹಿಪ್ಪರಗಾ ಎಸ್.ಎನ್ ಗ್ರಾಮದಲ್ಲಿ 7 ಎಕರೆ ಜಮೀನಿದೆ. ಇದೆ ಜಮೀನಿನ ದಡದಲ್ಲಿ 15 ವರ್ಷದ ಹಿಂದೆಯೇ ಅಂತ್ಯಸಂಸ್ಕಾರಕ್ಕೆ ಸಮಾಧಿಯನ್ನು ಅಜ್ಜ ತೋಡಿದ್ದರು. ನಿತ್ಯ ಹೊಲದ ಕೆಲಸಕ್ಕೆಂದು ಹೋದಾಗ ಕೊಂಚ ಸಮಯ ಮೀಸಲಿಟ್ಟು ಖುದ್ದು ತಾವೊಬ್ಬರೇ ಅಕ್ಕಪಕ್ಕದಲ್ಲಿ ತಮಗೂ ಮತ್ತು ತಮ್ಮ ಹೆಂಡತಿಗಾಗಿ ಎರಡು ಸಮಾಧಿಗಳನ್ನು ತೋಡಿದ್ದರು.

15 ವರ್ಷಗಳಿಂದ ಕಾಪಾಡಿಕೊಂಡು ಬಂದ ಸಮಾಧಿ:ಹೀಗೆ ತೆಗೆದ ಸಮಾಧಿಗಳಿಗೆ ಸಿಮೆಂಟ್​ನಿಂದ ಪ್ಲಾಸ್ಟರ್ ಮಾಡಿ, ಸುಣ್ಣ ಬಣ್ಣ ಹಚ್ಚಿದ್ದರು. ಒಂದು ತನಗೆ ಇನ್ನೊಂದು ಸಮಾಧಿ ತನ್ನ ಮಡದಿಗೆ ಅಂತ ನಿಯೋಜನೆ ಮಾಡಿದ್ದರು. ಸಮಾಧಿ ತೋಡಿದ್ದು ಮಾತ್ರವಲ್ಲ ಅವುಗಳನ್ನು ಪೋಷಣೆ ಮಾಡುತ್ತ ಆಗಾಗ ಸ್ವಚ್ಛಗೊಳಿಸುತ್ತ ಬರೋಬ್ಬರಿ 15 ವರ್ಷಗಳಿಂದ ನಶಿಸದಂತೆ ನೋಡಿಕೊಂಡಿದ್ದರು. ತಾನು ಹಾಗೂ ತನ್ನ ಮಡದಿ ನಿಧನದ ನಂತರ ಇದೇ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವಂತೆ ಗ್ರಾಮಸ್ಥರಿಗೆ ಕುಟುಂಬಸ್ಥರಿಗೆ ಮನವಿ ಕೂಡ ಮಾಡಿದ್ದರು.

ಪತ್ನಿಯ ಸಮಾಧಿ ಪಕ್ಕದಲ್ಲೇ ಪತಿಯ ಸಮಾಧಿ:ಕಳೆದ ಆರು ವರ್ಷಗಳ ಹಿಂದೆ ಇವರ ಪತ್ನಿ ನೀಲಮ್ಮ ದೇವರನಾವದಗಿ ನಿಧನರಾಗಿದ್ದರು. ಆಗ ಸಿದ್ದಪ್ಪ ಹಾಗೂ ಗ್ರಾಮಸ್ಥರು ಮೊದಲೇ ತೋಡಿದ್ದ ಸಮಾಧಿಯಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದರು. ಪತ್ನಿ ಅಗಲಿಕೆ ನಂತರ ಆರು ವರ್ಷಗಳಿಂದ ಸೊರಗಿದ್ದ ಅಜ್ಜ ಇದೀಗ ವಯೋ ಸಹಜ ನಿಧನರಾಗಿದ್ದಾರೆ. ಅಜ್ಜನ ಕೋರಿಕೆಯಂತೆಯೇ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ಇದ್ದ ಇನ್ನೊಂದು ಸಮಾಧಿಯಲ್ಲಿಯೇ ಸಿದ್ದಪ್ಪನ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಕುಟುಂಬಸ್ಥರು ಮಾಡಿದ್ದಾರೆ.

ಸಿದ್ದಪ್ಪಜ್ಜ ಜೀವನ ಪೂರ್ತಿ ಯಾರಿಗೂ ಭಾರವಾಗದಂತೆ ಬಾಳ್ವೆ ನಡೆಸಿದ್ದರಂತೆ, ಸತ್ತ ನಂತರವೂ ಯಾರಿಗೂ ಭಾರವಾಗಿಲ್ಲ, ಇಂತಹ ಅಜ್ಜ ನಮ್ಮ ಗ್ರಾಮಕ್ಕೆ ಮಾದರಿಯಾಗಿದ್ದಾರೆ ಅನ್ನುವುದು ಗ್ರಾಮಸ್ಥರ ಮಾತು. ಒಟ್ಟಿನಲ್ಲಿ ಜೀವ ಇರುವಾಗಲೇ ಸ್ವತಃ ತಾವೇ ತೆಗೆದಿದ್ದ ಸಮಾಧಿಯಲ್ಲಿ ಈಗ ಸಿದ್ದಪ್ಪಜ್ಜ ಸಮಾಧಿಯಾಗಿದ್ದಾರೆ.

ಇದನ್ನೂ ಓದಿ:ಬೆಳಗಾವಿ ತಹಶೀಲ್ದಾರ್ ಅಶೋಕ ಮಣ್ಣಿಕೇರಿ ಅಂತ್ಯಕ್ರಿಯೆ: ನನ್ನ ಕೈಯನ್ನೇ ಕಳೆದುಕೊಂಡ ನೋವಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ABOUT THE AUTHOR

...view details