ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನ ಸೇರುವ ಮೂಲಕ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ.
ಫೆ. 5, 6, ಹಾಗೂ 7ರಂದು ಮೂರು ದಿನಗಳ ಕಾಲ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಸಮ್ಮೇಳನ ಯಾವುದೇ ಅಡೆತಡೆಗಳಿಲ್ಲದೇ ಅದ್ಧೂರಿಯಾಗಿ ನೆರವೇರಿದೆ. ರಾಜ್ಯದ ಹಲವೆಡೆಗಳಿಂದ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಸಾಗರದಂತೆ ಹರಿದು ಬಂದಿದ್ದು ಸಮ್ಮೇಳನದ ಕಳೆ ಹೆಚ್ಚಿಸಿತು. ಜಿಲ್ಲಾಡಳಿತ ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಯನ್ನು ವಹಿಸಿತ್ತು. ಪೊಲೀಸ್ ಇಲಾಖೆ ಕೂಡಾ ಮುಂಜಾಗೃತ ಕ್ರಮವಾಗಿ 4,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸುವುದರ ಜೊತೆಗೆ ಡ್ರೋಣ್ ಬಳಸುವ ಮೂಲಕ ಭದ್ರತೆ ಒದಗಿಸಿದರು. ಒಟ್ಟಿನಲ್ಲಿ ಎಲ್ಲರ ಅಭಿಮಾನ ಹಾಗೂ ಶ್ರಮದಿಂದ ಬಿಸಿಲೂರಿನ ಕನ್ನಡ ಜಾತ್ರೆ ಒಂದು ರೀತಿ ಯಶಸ್ವಿ ಇತಿಹಾಸವನ್ನೇ ನಿರ್ಮಿಸಿದೆ.
ಡಿಸಿಗೆ ಮೆಚ್ಚುಗೆಯ ಮಹಾಪೂರ:
ಸಮ್ಮೇಳನ ಜವಾಬ್ದಾರಿ ಹೊತ್ತು ಹಗಲು ರಾತ್ರಿ ಎನ್ನದೇ ಶ್ರಮಿಸಿದ ಜಿಲ್ಲಾಧಿಕಾರಿ ಬಿ.ಶರತ್ ಅವರಿಗೆ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿವೆ. ಸಮ್ಮೇಳನ ವೇದಿಕೆಯಿಂದ ಹಿಡಿದು ಊಟದ ವ್ಯವಸ್ಥೆ, ಎಲ್ಲವೂ ಅಚ್ಚುಕಟ್ಟಾಗಿ ನಿಭಾಯಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವುದರ ಜೊತೆಗೆ ತಾವು ಸಮ್ಮೇಳನ ಸ್ಥಳದಲ್ಲೇ ಬೀಡುಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲವನ್ನು ನೋಡಿಕೊಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದು, ಕನ್ನಡದ ಡಿಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.