ಕಲಬುರಗಿ:ಸುಸರ್ಜಿತ ಕಟ್ಟಡ ಮತ್ತು ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ, ವಿದ್ಯಾರ್ಥಿಗಳು 70 ಕಿಲೋ ಮೀಟರ್ ಪಾದಯಾತ್ರೆ ಮಾಡಲು ಮುಂದಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಆದರೆ, ಪಾದಯಾತ್ರೆಯನ್ನು ಅರ್ಧಕ್ಕೆ ತಡೆದ ಅಧಿಕಾರಿಗಳು ಮಕ್ಕಳ ಮನವೊಲಿಸಲು ಶತಪ್ರಯತ್ನ ಮಾಡಿದರು.
ವಿದ್ಯಾರ್ಥಿಗಳಿಂದ 70 ಕಿ.ಮೀ ಪಾದಯಾತ್ರೆ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ನಗರಕ್ಕೆ ಆಗಮಿಸಿತ್ತಿದ್ದಾರೆ. ನಾಡದೊರೆಯ ಮುಂದೆ ತಮ್ಮ ಅಳಲು ತೋಡಿಕೊಳ್ಳಲು ಅಫಜಲಪುರ ತಾಲೂಕಿನ ಘತ್ತರಗಿಯ ಪ್ರೌಢ ಶಾಲಾ ಮಕ್ಕಳು ಅಲ್ಲಿಂದ, ಜಿಲ್ಲಾ ಕೇಂದ್ರ ಕಲಬುರಗಿವರೆಗೆ ಸುಮಾರು 70 ಕಿ.ಮೀ ದೂರ ಪಾದಯಾತ್ರೆ ಆರಂಭಿಸಿದ್ದರು.
ವಿದ್ಯಾರ್ಥಿಗಳಿಂದ 70 ಕಿ.ಮೀ ಪಾದಯಾತ್ರೆ ಜೀವಭಯದಲ್ಲಿ ಪಾಠ ಕೇಳುವ ಮಕ್ಕಳು:ಘತ್ತರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 230 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಆರಕ್ಕೆ ಆರು ಕೋಣೆಗಳು ಮಳೆ ಬಂದರೆ ಸೋರುತ್ತವೆ. ಅಲ್ಲದೇ ಸಂಪೂರ್ಣ ಶೀಥಿಲಾವಸ್ಥಗೆ ತಲುಪಿದ್ದು, ಪ್ರಾಣ ಭಯದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಿಕ್ಷಕರು ಜೀವ ಭಯದಲ್ಲಿಯೇ ಪಾಠ ಹೇಳುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಂದ 70 ಕಿ.ಮೀ ಪಾದಯಾತ್ರೆ ಮಕ್ಕಳ ಹೋರಾಟಕ್ಕೆ ಪೋಷಕರು, ಗ್ರಾಮಸ್ಥರ ಸಾಥ್:ಇತ್ತೀಚೆಗಷ್ಟೆ ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆ ಮುಜರಾಯಿ ಇಲಾಖೆಗೆ ಸೇರಿದ ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ ಮೂರು ಕೊಣೆವುಳ್ಳ ಒಂದು ಕಟ್ಟಡವನ್ನು ತಾತ್ಕಾಲಿಕವಾಗಿ ಶಾಲೆಗೆ ನೀಡಲಾಗಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಅದು ಸರಿಹೋಗುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಮಕ್ಕಳು ಆಗ್ರಹಿಸುತ್ತಿದ್ದಾರೆ. ಮಕ್ಕಳ ಹೋರಾಟಕ್ಕೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ. ಗ್ರಾ.ಪ.ಅಧ್ಯಕ್ಷರು ಸದಸ್ಯರು ಕೂಡ ವಿದ್ಯಾರ್ಥಿಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ 70 ಕಿ.ಮೀ ಪಾದಯಾತ್ರೆ ತಪ್ಪಿಸಿಕೊಂಡು ಓಡಿದ ವಿದ್ಯಾರ್ಥಿಗಳು: ವಿದ್ಯಾರ್ಥಿಗಳು ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಸಹಾಯಕ ಆಯುಕ್ತೆ ಮೋಹನಾ ರೋತ್, ತಾಲೂಕು ಆಡಳಿತ ಅಧಿಕಾರಿಗಳು ಪಾದಯಾತ್ರೆ ತಡೆದು ಮನವೊಲಿಸಲು ಪ್ರಯತ್ನಿಸಿದರು. ರಸ್ತೆಗೆ ಪೊಲೀಸರು ಅಧಿಕಾರಿಗಳು ಅಡ್ಡಲಾದ ಕಾರಣ ವಿದ್ಯಾರ್ಥಿಗಳು ಜಮೀನನ ಮೂಲಕ ಪಾದಯಾತ್ರೆ ಮುಂದುವರೆಸಲು ಯತ್ನಿಸಿದರು. ಪೊಲೀಸರ ಸಹಾಯದಿಂದ ಮಕ್ಕಳನ್ನು ತಡೆದ ಅಧಿಕಾರಿಗಳು, ನಿಮ್ಮ ಸಮಸ್ಯೆ ಏನೇ ಇದ್ದರೂ ಬಗೆ ಹರಿಸುತ್ತೇವೆ ಎಂದು ಭರವಸೆ ಮೂಡಿಸಿ, ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ವಿಜಯಪುರದಲ್ಲಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ: ಜೀವ ಪಣಕ್ಕಿಟ್ಟು ಹಳ್ಳ ದಾಟುವ ದುಸ್ಥಿತಿ
ಇಷ್ಟು ದಿನ ಸಮಸ್ಯೆ ಕೇಳಲು ಬಾರದ ಅಧಿಕಾರಿಗಳು ಸಿಎಂ ಬಳಿ ತೆರಳಲು ಮುಂದೆ ಆದಾಗ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಇದೆ ಕೆಲಸ ಮೊದಲೇ ಯಾಕೆ ಮಾಡಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿದೆ. ಶೀಘ್ರವೇ ಮಕ್ಕಳ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಉಗ್ರ ಪ್ರಮಾಣದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.