ಕಲಬುರಗಿ :ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಪಡಿತರ ಅಕ್ಕಿ ವಿತರಣೆ ಮಾಡ್ತಿದೆ. ಆದ್ರೆ, ಬಡವರ ಅಕ್ಕಿಯನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಅಕ್ಕಿಯನ್ನ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ನಡುವೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದಾಜು 70-80 ಕ್ವಿಂಟಾಲ್ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ. ಹೊರ ವಲಯದ ನಂದೂರ್ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾಹಿತಿ ತಿಳಿದು ಹೋರಾಟಗಾರರು ದಾಳಿ ನಡೆಸಿದ್ದರು.
ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಮಾರು ನೂರು ಬ್ಯಾಗಿಗೂ ಹೆಚ್ಚಿನ ಪಡಿತರ ಅಕ್ಕಿಯನ್ನ ಜಪ್ತಿ ಮಾಡಿದ್ದಾರೆ. ಜೊತೆಗೆ ಪಡಿತರ ಅಕ್ಕಿ ತಂದಿದ್ದ ಮಿನಿ ಲಾರಿಯನ್ನು ಜಪ್ತಿ ಮಾಡಲಾಗಿದೆ. ಮಧುಕರ್, ಕಿರಣಕುಮಾರ್ ಸೇರಿ ನಾಲ್ಕೈದು ಮಂದಿ ಈ ಪಡಿತರ ಅಕ್ಕಿ ಮಾರಾಟ ದಂಧೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ಈ ಸಂಬಂಧ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ರಾತ್ರೋರಾತ್ರಿ ಕೋಟ್ಯಂತರ ಮೌಲ್ಯದ ಕಾರಿಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಐವರ ಬಂಧನ