ಕಲಬುರಗಿ: ಜಿಲ್ಲೆಯಲ್ಲಿ ದಾಲ್ ಮತ್ತು ಫ್ಲೋರ್ ಮಿಲ್ನಲ್ಲಿ ಪಡಿತರ ಧಾನ್ಯ ಅಕ್ರಮ ದಾಸ್ತಾನು ಮಾಡಿ, ಕಾಳ ಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
7 ನ್ಯಾಯಬೆಲೆ ಅಂಗಡಿಗಳು ಅಮಾನತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದಾಲ್ ಮಿಲ್ ಮತ್ತು ಫ್ಲೋರ್ ಮಿಲ್ ಮೇಲೆ ದಾಳಿ ನಡೆಸಿ 187 ಕ್ವಿಂಟಲ್ ಅಕ್ಕಿ, 73 ಕ್ವಿಂಟಲ್ ಗೋಧಿ, 36 ಹಾಲಿನ ಪೌಡರ್ ಪ್ಯಾಕೇಟ್ ವಶಪಡಿಸಿಕೊಳ್ಳಲಾಗಿದೆ. ಎರಡು ತೂಕದ ಯಂತ್ರ ಮತ್ತು ಗೂಡ್ಸ್ ಟೆಂಪೋ ವಾಹನ ಜಪ್ತಿ ಮಾಡಲಾಗಿದೆ.
ದಾಲ್ ಮಿಲ್ ರೇವಣಸಿದ್ಧಪ್ಪ ಮಹಾಜನ್, ಚಾಲಕ ಮಹ್ಮದ್ ಗೌಸ್ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 7 ನ್ಯಾಯ ಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ.
ದಾಳಿ ವೇಳೆ ಪಡಿತರ ತೂಕದಲ್ಲಿ ಮೋಸ, ಹಣ ಪಡೆದು ಪಡಿತರ ಧಾನ್ಯ ವಿತರಣೆ ಆರೋಪದ ಮೇಲೆ ಜಿಲ್ಲೆಯ ಏಳು ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ. ಗ್ರಾಹಕರಿಂದ 20 ರಿಂದ 30 ರೂಪಾಯಿ ವಸೂಲಿ ಮಾಡಿ, ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಆಳಂದ ತಾಲೂಕಿನ ಸಾವಳೇಶ್ವರ, ಹಿತ್ತಲಶಿರೂರ, ಬೆಟ್ಟ ಜೇವರ್ಗಿ, ಚಿಂಚೋಳಿ ತಾಲೂಕಿನ ಸೀಮಾ ಹೊಸಳ್ಳಿ, ಧುತ್ತರಗಾ, ಸೇಡಂ ತಾಲೂಕಿನ ಕುರಕುಂಟಾ ಹಾಗೂ ಕಲಬುರಗಿ ನಗರದ ನ್ಯಾಯಬೆಲೆ ಅಂಗಡಿ ಸಂಖ್ಯೆ 164 ಅನ್ನು ಸೇರಿವೆ.
ಲಾಕ್ಡೌನ್ ಹಿನ್ನೆಲೆ 2 ತಿಂಗಳ ಪಡಿತರ ನೀಡಲು ಸರ್ಕಾರ ಸೂಚನೆ ನೀಡಿತ್ತು. ಆದರೆ, ಕಡಿಮೆ ಪಡಿತರ ನೀಡಿ, ತೂಕದಲ್ಲಿ ವಂಚಿಸಿದ್ದು, ಬಯೋಮೆಟ್ರಿಕ್, ಒಟಿಪಿ ಹೆಸರಲ್ಲಿ ಗ್ರಾಹಕನಿಂದ ಹಣ ಕೀಳುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.