ಕಲಬುರಗಿ: ಮಹಾರಾಷ್ಟ್ರದಿಂದ ವಾಪಸಾಗಿದ್ದ ಗರ್ಭಿಣಿ ಸೇರಿ ಇಂದು ಏಳು ಜನ ವಲಸಿಗರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜೇವರ್ಗಿ ತಾಲೂಕು ಯಾಳವಾರ ಕ್ರಾಸ್ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಯಡ್ರಾಮಿ ತಾಲೂಕಿನ ಹಂಗರಗಾ(ಕೆ) ಗ್ರಾಮದ 22 ವರ್ಷದ ವ್ಯಕ್ತಿ, ಸುಂಬಡ ಗ್ರಾಮದ 35 ಹಾಗೂ 46 ವರ್ಷದ ಇಬ್ಬರು ವ್ಯಕ್ತಿಯಲ್ಲಿ ಮತ್ತು ಅರಳಗುಂಡಗಿ ಗ್ರಾಮದ 25 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಯಾಳವಾರ ಗ್ರಾಮದ ನಿವಾಸಿ 22 ವರ್ಷದ ಮಹಿಳೆ ಏಳು ತಿಂಗಳ ಗರ್ಭಿಣಿಗೂ ಸೋಂಕು ತಗುಲಿದೆ. ಅದರಂತೆ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದ 26 ವರ್ಷದ ವ್ಯಕ್ತಿಗೆ ಹಾಗೂ ಯಾಗಾಪುರದ 50 ವರ್ಷದ ವ್ಯಕ್ತಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಏಳು ಜನರು ಮಹಾರಾಷ್ಟ್ರದಿಂದ ವಾಪಸಾಗಿದ್ದ ವಲಸಿಗರಾಗಿದ್ದಾರೆ. ಇವರಲ್ಲಿ ಆರು ಜನ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಗರ್ಭಿಣಿ ಎನ್ನುವ ಕಾರಣಕ್ಕೆ 22 ವರ್ಷದ ಮಹಿಳೆಗೆ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು.
ಇದೀಗ ಎಲ್ಲ ಸೋಂಕಿತರನ್ನು ಇಎಸ್ಐ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಹಲವರ ಥ್ರೋಟ್ ಸ್ಯಾಂಪಲ್ ಕೂಡಾ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಇವರಲ್ಲಿ 55 ಜನ ಗುಣಮುಖರಾಗಿದ್ದಾರೆ. ಏಳು ಜನ ಮೃತಪಟ್ಟಿದ್ದಾರೆ. 72 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.