ಕಲಬುರಗಿ: ರೋಗಿಯೋರ್ವ ಮಾಡಿದ ಎಡವಟ್ಟಿನಿಂದ ಜಯದೇವ ಹೃದ್ರೋಗ ಕೇಂದ್ರದ ಐವರು ವೈದ್ಯರು ಹಾಗೂ 31 ಜನ ಸಿಬ್ಬಂದಿ ಕ್ವಾರಂಟೈನ್ ಆಗಿದ್ದು, ಕ್ಯಾಥಲಾಬ್ ವಾರ್ಡ್ ಬಂದ್ ಮಾಡಿ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಸೇಡಂನಿಂದ ಬಂದಿದ್ದ ವ್ಯಕ್ತಿಯೋರ್ವ ಇಲ್ಲಿನ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಆ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಭಾನುವಾರದಂದು ನೇರವಾಗಿ ಜಯದೇವ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಯಾವುದೇ ಮಾಹಿತಿ ನೀಡದೆ ಎದೆನೋವು ಎಂದು ಜಯದೇವದಲ್ಲಿಯೇ ದಾಖಲಾಗಿದ್ದ.
ರೋಗಿಗೆ ಸೋಮವಾರದಂದು ಆ್ಯಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ. ಆದ್ರೀಗ ವ್ಯಕ್ತಿಯ ವರದಿ ಬಂದಿದ್ದು, ಅದರಲ್ಲಿ ಕೊರೊನಾ ದೃಢಪಟ್ಟಿದೆ. ಇದರಿಂದಾಗಿ ಇಡೀ ಆಸ್ಪತ್ರೆ ಸಿಬ್ಬಂದಿ ಕಂಗಾಲಾಗಿದ್ದಾರೆ. ಪಾಸಿಟಿವ್ ಬಂದ ವ್ಯಕ್ತಿಯನ್ನು ಇಎಸ್ಐ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಆಸ್ಪತ್ರೆ ಕ್ಲೋಸ್: ಬಸವೇಶ್ವರ ಆಸ್ಪತ್ರೆಯಿಂದ ನೇರವಾಗಿ ಜಯದೇವ ಆಸ್ಪತ್ರೆಗೆ ಬಂದು ಸರಿಯಾದ ಮಾಹಿತಿ ನೀಡದೇ ದಾಖಲಾಗಿರುವುದೇ ಇಷ್ಟೆಲ್ಲ ಎಡವಟ್ಟಿಗೆ ಕಾರಣವಾಗಿದೆ. ಆತ ಮಾಹಿತಿ ನೀಡಿದ್ದರೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುತ್ತಿತ್ತು. ಒಬ್ಬ ರೋಗಿ ವಿಷಯ ಮುಚ್ಚಿಟ್ಟಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ. ಸ್ಟ್ಯಾಫ್ ಜೊತೆಗೆ ಇತರೆ ರೋಗಿಗಳಿಗೂ ತೊಂದರೆಯಾಗಿದೆ. ಸದ್ಯ ಬೇರೆ ವಾರ್ಡ್ಗಳಲ್ಲಿದ್ದ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಆಗೋವರೆಗೂ ಬಂದ್ ಮಾಡಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಯದೇವ ಹೃದ್ರೋಗ ಕೇಂದ್ರದ ನಿರ್ದೇಶಕ ಡಾ. ಬಾಬುರಾವ್ ಹುಗಡೀಕರ್ ತಿಳಿಸಿದ್ದಾರೆ.