ಕಲಬುರಗಿ :ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿಗಳ ನಗದು ಮತ್ತು ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 4.5 ಕೋಟಿ ನಗದು, 1.15 ಕೋಟಿ ಮೌಲ್ಯದ ಮದ್ಯ ಹಾಗೂ 8.5 ಲಕ್ಷದ ಮೌಲ್ಯದ ಮಾದಕ ವಸ್ತುಗಳು ಸೇರಿ ಬರೋಬ್ಬರಿ 5.76 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 4 ಕೋಟಿ 53 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಇದುವರೆಗೂ 1,15, 04,746 ಕೋಟಿ ರೂಪಾಯಿ ಮೌಲ್ಯದ 41,530 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 8,54,300 ಮೌಲ್ಯದ 12.9 ಕೆಜಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಮತದಾರರಿಗೆ ಹಂಚಲು ತರಲಾಗಿದ್ದ ಸುಮಾರು 4,16,480 ರೂಪಾಯಿ ಮೌಲ್ಯದ 20,705 ನಾನಾ ಬಗೆಯ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಒಟ್ಟು 21 ಎಫ್ಐಆರ್ ದಾಖಲಾಗಿದೆ. ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ 8 ಎಫ್ಐಆರ್ ದಾಖಲಾಗಿದೆ. ಅಲ್ಲದೆ ಹಲವು ವಾಹನಗಳನ್ನು ಜಪ್ತಿ ಮಾಡಲಾಗಿದೆ. ನಾಳೆ ಶಾಂತಿಯಿಂದ ಮತದಾನ ನಡೆಯಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.