ಕಲಬುರಗಿ :ವಿಧಾನಸಭಾ ಚುನಾವಣೆಯ ಅಖಾಡ ಕಾವೇರುತ್ತಿದೆ. ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳು ಪಕ್ಷದ ಮುಖಂಡರಿಗೆ ದುಂಬಾಲು ಬೀಳುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ನಿತಿನ್ ಗುತ್ತೆದಾರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರ ಮೊರೆ ಹೋಗಿದ್ದಾರೆ. ಸುಮಾರು 20 ಕಿಲೋ ಮೀಟರ್ ದೂರದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ.
ಜಿಲ್ಲೆಯ ಫರಹತಾಬಾದ್ದಿಂದ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಅಭಿಮಾನಿ ರವಿ ಮಡಿವಾಳ ಎಂಬವರು ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ. ಅಫಜಲಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ನಿತೀನ್ ಗುತ್ತೇದಾರ್‌ರಿಗೆ ಟಿಕೆಟ್ ಸಿಗಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಸಿಲು ಲೆಕ್ಕಿಸದ ಇವರು ಸುಮಾರು 20 ಕಿ.ಮೀ ದೂರ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಗಮನ ಸೆಳೆಯುತ್ತಿದ್ದಾರೆ.
ಟಿಕೆಟ್‌ಗಾಗಿ ಗುತ್ತೇದಾರ್ ಕಸರತ್ತು: ಅಫಜಲಪುರ ಮತ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಸಹೋದರರ ಮಧ್ಯೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ಇವರ ಸಹೋದರ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ್ ಕೂಡ ಇದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಅಣ್ಣನ ವಿರುದ್ಧವೇ ಪೈಪೋಟಿ: ಕಳೆದ ಬಾರಿಯ ಚುನಾವಣೆಯಲ್ಲಿ, "ಇದು ನನ್ನ ಕೊನೆಯ ಸ್ಪರ್ಧೆ. ಇನ್ನು ಮುಂದೆ ಸಹೋದರನಿಗೆ ಅವಕಾಶ ಮಾಡಿ ಕೊಡುವೆ" ಎಂದು ಮಾಲೀಕಯ್ಯ ಗುತ್ತೇದಾರ್ ಸಹೋದರ ನಿತಿನ್‌ಗೆ ಮಾತು ಕೊಟ್ಟಿದ್ದರಂತೆ. ಆದ್ರೆ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಇದೊಂದು ಬಾರಿ ಸ್ಪರ್ಧೆ ಮಾಡುವುದಾಗಿ ಮಾಲಿಕಯ್ಯ ಗುತ್ತೇದಾರ್ ಹೇಳುತ್ತಿದ್ದಾರೆ. ಅಣ್ಣನ ನಡೆಯಿಂದ ಅಸಮಾಧಾನಗೊಂಡಿರುವ ನಿತಿನ್ ಗುತ್ತೇದಾರ್ ಅಣ್ಣನ ವಿರುದ್ಧವೇ ಸೆಡ್ಡು ಹೊಡೆದು ನಿಂತಿದ್ದಾರೆ. ಬಿಜೆಪಿ ಟಿಕೆಟ್ ಪಡೆಯಲು ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.