ಕಲಬುರಗಿ: ಅವರೆಲ್ಲ ದುಡುಕಿನ ನಿರ್ಧಾರದಿಂದ ಜೈಲು ಸೇರಿದವರು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು 14 ವರ್ಷಗಳ ಕಾಲ ಜೈಲಿನಲ್ಲಿ ವನವಾಸ ಅನುಭವಿಸಿದ ಆ ಜೈಲು ಹಕ್ಕಿಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಸನ್ನಡತೆ ಆಧಾರದ ಮೇಲೆ 18 ಕೈದಿಗಳ ಬಿಡುಗಡೆ.. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಮಂದಿ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಗೊಳಿಸಲಾಯಿತು. ಪಳನಿ, ಭೀಮನಗೌಡ, ರಾಚಪ್ಪ, ಜಗನ್ನಾಥ, ಸುರೇಶ್, ಮಹಾದೇವಿ ಭಡನೋರ್ ಸೇರಿ 18 ಜನರನ್ನ ಬಿಡುಗಡೆ ಮಾಡಲಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷಗಳ ಕಾಲ ಕಲಬುರಗಿ ಜಿಲ್ಲೆ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಬಂಧಿಗಳನ್ನು ಸ್ಥಾಯಿ ಸಲಹಾ ಸಮಿತಿ ಶಿಫಾರಸ್ಸಿನಂತೆ ಸರ್ಕಾರಕ್ಕೆ ಕಳಿಸಲಾಗಿತ್ತು. ಸರ್ಕಾರದ ಆದೇಶದಂತೆ ಓರ್ವ ಮಹಿಳೆ ಸೇರಿ 18 ಜನ ಸಜಾ ಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ.
ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿನ ಅರಿವಾಗಿದೆ. ಮುಂದೆ ನಮ್ಮ ಕುಟುಂಬದೊಂದಿಗೆ ಒಳ್ಳೆಯ ಜೀವನ ಸಾಗಿಸುತ್ತೇವೆ. ಮುಂದೆಂದೂ ಇಂತಹ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಪ್ಪಿನ ಅರಿವು ಮಾಡಿಕೊಂಡು ಬಂಧಿಗಳು ಭಾವುಕರಾದರು.
ಈ ವೇಳೆ ಜೈಲು ಅಧೀಕ್ಷಕರಾದ ಪಿ.ಎಸ್ ರಮೇಶ ಅವರು ಬಿಡುಗಡೆಯಾದ ಬಂಧಿಗಳಿಗೆ ಶುಭಕೋರಿದರು. ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸುಬ್ರಮಣ್ಯ ಅವರು ಬಿಡುಗಡೆ ಪ್ರಮಾಣ ಪತ್ರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕಲಬುರಗಿ ಸಿಜೆಎಂ ಬಾಳಪ್ಪ ಜರುಗು ಅವರು ಉಪಸ್ಥಿತರಿದ್ದರು.