ಕಲಬುರಗಿ: ಹಲವರು ಅಪರಾಧಗಳನ್ನು ಮಾಡಿ ಜೈಲು ಸೇರಿದ್ದರು. ಸೆರೆವಾಸ ಅನುಭವಿಸುವ ಸಂದರ್ಭದಲ್ಲಿ ಸನ್ನಡತೆ ತೋರಿದ್ರಿಂದ ರಾಜ್ಯ ಸರ್ಕಾರ ನಿನ್ನೆ ರಾಜ್ಯದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 125 ಮಂದಿಯನ್ನು ಬಿಡುಗಡೆಗೊಳಿಸಿದೆ.
ಯಾವುದೋ ಕೆಟ್ಟ ಘಳಿಗೆ ಎನ್ನುವಂತೆ ಕೋಪದ ಕೈಗೆ ಬುದ್ಧಿ ಕೊಟ್ಟು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ಒಳ್ಳೆಯ ನಡತೆ ತೋರಿದ್ರಿಂದ ನಿನ್ನೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು 125 ಜನ ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಿದೆ.
ಕಲಬುರಗಿ ಜೈಲಿನಿಂದ 18 ಮಂದಿ ಬಿಡುಗಡೆ - ಬಿಡುಗಡೆಗೊಂಡವರ ಪ್ರತಿಕ್ರಿಯೆ ಜಿಲ್ಲೆಯಲ್ಲಿ 18 ಮಂದಿ ಬಿಡುಗಡೆ:
ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಮಾತನಾಡಿ, ಸರ್ಕಾರದ ಆದೇಶದಂತೆ ಕಲಬುರಗಿ ಜೈಲಿನಲ್ಲೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶೆಟ್ಡೆವ್ವ, ಲಕ್ಷ್ಮೀ, ಪಿ.ಕುಮಾರಸ್ವಾಮಿ, ರಶೀದ್, ಯಲಗೊಂಡ, ಮಲ್ಲಣ್ಣ ಸೇರಿ ಒಟ್ಟು 18 ಬಂಧಿತರನ್ನು ಬಿಡುಗಡೆ ಮಾಡಲಾಗಿದೆ.
ಒಬ್ಬರು 20 ವರ್ಷ ಸೆರೆವಾಸ ಅನುಭವಿಸಿದ್ರೆ, ಇನ್ನೊಬ್ಬರು 16 ವರ್ಷ, ಮತ್ತೊಬ್ಬರು 12 ವರ್ಷ. ಹೀಗೆ ಒಬ್ಬೊಬ್ಬರು ಹತ್ತಾರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಬಿಡುಗಡೆಯಾದವರು ಮಾಡಿರುವ ಒಂದೊಂದು ಕೊಲೆ, ಅಪರಾಧದ ಹಿಂದೆ ಒಂದೊಂದು ಕಥೆಗಳಿವೆ. ಸೆರೆವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಜೈಲಾಧಿಕಾರಿಗಳು ಸೂಚಿಸಿದ ಕೆಲಸಗಳನ್ನು ನಿಷ್ಠೆಯಿಂದ ಚಾಚು ತಪ್ಪದೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಜೈಲಿನಲ್ಲಿ ಇವರೆಲ್ಲ ಬೇಕರಿ, ಬಟ್ಟೆ ನೇಯ್ಗೆ, ಟೈಲರಿಂಗ್, ಕೃಷಿ, ತೋಟಗಾರಿಕೆ, ಆಟಿಕೆ ಸಾಮಾನುಗಳ ತಯಾರಿಕೆ ಹೀಗೆ ಒಂದೊಂದು ಕೌಶಲ್ಯಗಳನ್ನು ಕಲಿತಿದ್ದಾರೆ. ಮಾಡಿದ ತಪ್ಪಿಗೆ ಇವರಿಗೆಲ್ಲ ಶಿಕ್ಷೆ ವೇಳೆ ಪಶ್ಚಾತ್ತಾಪವಾಗಿದೆ. ಜೈಲಿನಲ್ಲಿ ಸಾಕಷ್ಟು ಕಲಿತಿರುವ ಇವರು, ಸದ್ಯ ಬಂಧನದಿಂದ ಬಿಡುಗಡೆಯಾಗಿ ಕುಟುಂಬದವರೊಂದಿಗೆ ಸೇರುತ್ತಿರುವ ಸಂತಸ ಇವರಲ್ಲಿ ಮನೆ ಮಾಡಿದೆ ಎಂದು ರಮೇಶ್ ತಿಳಿಸಿದರು.
ಇದನ್ನೂ ಓದಿ:ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಬಿಡುಗಡೆಗೊಂಡ ಪಿ.ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಕೆಲಸಕ್ಕೆಂದು ನಗರಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ನಾನು ತಪ್ಪು ಮಾಡಿ ಜೈಲು ಸೇರಿದೆ. ಜೈಲುವಾಸ ನನಗೆ ಜೀವನವನ್ನು ಕಲಿಸಿಕೊಟ್ಟಿದೆ. ನನ್ನ ಗ್ರಾಮೀಣ ಪ್ರದೇಶಕ್ಕೆ ತೆರಳಿ ಕೂಲಿಯಾದರೂ ಮಾಡಿ ತಂದೆ ತಾಯಿಯನ್ನು ನೋಡಿಕೊಳ್ಳುತ್ತೇನೆಂದು ತಿಳಿಸಿದರು.