ಕಲಬುರಗಿ:14 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು, ಬಳಿಕ ಕೈಕಾಲು ಕಟ್ಟಿ ಭೀಮಾ ನದಿಯಲ್ಲಿ ಎಸೆದಿರುವ ಘಟನೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.
ಪ್ರೀತಿಯ ವಿಷಯವಾಗಿ ಬಾಲಕನ ಹತ್ಯೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನರಿಬೋಳ ಗ್ರಾಮದ 14ರ ಬಾಲಕ ಅದೇ ಗ್ರಾಮದ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಆದರೆ, ಯುವತಿಯ ತಾಯಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ, ತನ್ನ ಪರಿಚಯಸ್ಥ ಮೆಹಬೂಬ್ ಎಂಬಾತನಿಗೆ ಬಾಲಕನನ್ನು ಹೆದರಿಸಲು ಹೇಳಿದ್ದಳು. ಆತ ಒಂದೆರಡು ಬಾರಿ ಆತನಿಗೆ ಹೆದರಿಸಿದ್ದದರೂ ಬಾಲಕ ಮತ್ತು ಯುವತಿ ನಡುವಿನ ಪ್ರೀತಿ ಮುಂದುವರೆದಿತ್ತು.
ಇದರಿಂದ ಕುಪಿತಗೊಂಡ ಮೆಹಬೂಬ್, ತನ್ನ ಸ್ನೇಹಿತರ ಜೊತೆಗೂಡಿ ಬಾಲಕನನ್ನು ಅಪಹರಿಸಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಆ ಬಳಿಕ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಹಾಕಿ ನರಿಬೋಳ-ಚಾಮನೂರ ಬಳಿಯ ಭೀಮಾ ನದಿಯ ಬ್ರಿಡ್ಜ್ ಕೆಳಗೆ ಶವ ಬಿಸಾಡಿದ್ದಾರೆ.