ಹಾವೇರಿ: ವಿವಿಧ ಕಾರಣಗಳಿಗಾಗಿ ಸಾರ್ವಜನಿಕರು ಪೊಲೀಸ್ ಮೆಟ್ಟಿಲೇರುತ್ತಾರೆ. ವಸ್ತುಗಳ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಇನ್ನೂ ಕೆಲವರು ತಮ್ಮ ಪ್ರಾಣಿಗಳು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಕೆಲವರು ಜೀವಬೆದರಿಕೆ, ತಂಟೆ, ತಕರಾರುಗಳಿಗೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ವಿಭಿನ್ನ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ವಿಭಿನ್ನ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವಕನ ಹೆಸರು ವೀರಯ್ಯ ಹಿರೇಮಠ. 30 ವರ್ಷದ ವೀರಯ್ಯ ಹಿರೇಮಠ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಯುವಕ. ಪಿಯುಸಿ ಓದಿಕೊಂಡಿರುವ ವೀರಯ್ಯ ಹಿರೇಮಠಗೆ ಯಾರೋ ವಾಮಾಚಾರ ಮಾಡಿಸಿದ್ದಾರಂತೆ. ಹೀಗಾಗಿ ತನಗೆ ರಾತ್ರಿಯೆಲ್ಲ ನಿದ್ದೆಯಿಲ್ಲ. ಮೈ-ಕೈ, ಕಾಲುಗಳ ನೋವು ಕಾಣಿಸಿಕೊಳ್ಳುತ್ತೆ. ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಅಂತಾ ಆಡೂರು ಪೊಲೀಸ್ ಠಾಣೆಯ ಪಿಎಸ್ಐಗೆ ವೀರಯ್ಯ ಪತ್ರ ಬರೆದಿದ್ದಾನೆ. ತನಗೆ ಯಾರು ವಾಮಾಚಾರ ಮಾಡಿಸಿದ್ದು, ಅವರನ್ನ ಹಿಡಿದು ಶಿಕ್ಷಿಸುವಂತೆ ವೀರಯ್ಯ ಮನವಿ ಮಾಡಿದ್ದಾನೆ.