86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಹಾವೇರಿ ಹಾವೇರಿ: ನಗರದಲ್ಲಿ ಜನವರಿ 6, 7 ಮತ್ತು 8 ರಂದು ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಕಾರ್ಯಗಳು ಭರದಿಂದ ಸಾಗುತ್ತಿದೆ. ಹಾವೇರಿ ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ದೇವಸ್ಥಾನದ ಮುಂದೆ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.
ಈ ಮಧ್ಯ ಏಲಕ್ಕಿ ಕಂಪಿನ ನಗರ ಹಾವೇರಿ ನಿಧಾನವಾಗಿ ಸಮ್ಮೇಳನಕ್ಕೆ ತೆರೆದುಕೊಳ್ಳಲಾರಂಭಿಸಿದೆ. ಹಾವೇರಿ ನಗರದ ಸರ್ಕಾರಿ ಕಚೇರಿಗಳ ಗೋಡೆಗಳು ಬಣ್ಣ ಪಡೆದುಕೊಳ್ಳಲಾರಂಭಿಸಿವೆ. ಸಮ್ಮೇಳನದ ಅಲಂಕಾರ ಸಮಿತಿಯಿಂದ 15ಕ್ಕೂ ಅಧಿಕ ಕಲಾವಿದರನ್ನು ಕರೆಸಿ ನಗರದಲ್ಲಿರುವ ಸರ್ಕಾರಿ ಕಚೇರಿ ಗೋಡೆಗಳಲ್ಲಿ ವರ್ಣಚಿತ್ರಕಲೆಯನ್ನು ಅನಾವರಣ ಮಾಡಲು ಆರಂಭಿಸಿದ್ದಾರೆ.
ವರ್ಲಿ, ರಿಯಾಲಿಸ್ಟಿಕ್ ಮತ್ತು ತ್ರಿಡಿ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡಿರುವ ಕಲಾವಿದರು ಗೋಡೆಗಳಲ್ಲಿ ವಿವಿಧ ಕಲಾಕೃತಿಗಳನ್ನು ಬಿಡಿಸಲು ಆರಂಭಿಸಿದ್ದಾರೆ. ಗೋಡೆಗಳಲ್ಲಿ ಕ್ಯಾನ್ವಸ್ ಕಾಣುತ್ತಿರುವ ಕಲಾವಿದರು ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ಬರೆಯುತ್ತಿದ್ದಾರೆ.
ಜೊತೆಗೆ ರಾಜ್ಯದ ಜಾನಪದ ಸೊಗಡಿನ ಕಲೆಗಳ ಚಿತ್ರಣವನ್ನು ಗೋಡೆಗಳ ಮೇಲೆ ಬಿಡಿಸಲಿದ್ದಾರೆ. ಅಲ್ಲದೇ ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಹಾವೇರಿ ಜಿಲ್ಲೆಯ ಸಾಹಿತಿಗಳು, ಪ್ರಮುಖ ಸ್ಥಳಗಳ ಚಿತ್ರಗಳನ್ನು ಗೋಡೆ ಮೇಲೆ ಬರೆಯಲಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಬಂದ ಕನ್ನಡಾಭಿಮಾನಿಗಳು ನಗರಕ್ಕೆ ಬಂದರೆ ಸಾಕು ಅವರಿಗೆ ಇಲ್ಲಿನ ಚಿತ್ರಗಳು ಹಾವೇರಿ ಮತ್ತು ರಾಜ್ಯದ ಸಂಪೂರ್ಣ ಚಿತ್ರಣವನ್ನ ತೆರೆದಿಡಲಿವೆ.
ಹಸಿರು, ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಿಂದ ವಿವಿಧ ಕಲಾಕೃತಿಗಳನ್ನು ಕಲಾವಿದರು ಬಿಡಿಸಲಾರಂಭಿಸಿದ್ದಾರೆ. ಕಳೆದೆರಡು ದಿನಗಳಿಂದ ನಗರದಲ್ಲಿರುವ ಕಲಾವಿದರು ಸಾಹಿತ್ಯ ಸಮ್ಮೇಳನ ಆರಂಭವಾಗುವವರೆಗೆ ನಗರವನ್ನು ಸಂಪೂರ್ಣ ವರ್ಣಮಯ ಮಾಡಲಿದ್ದಾರೆ. ಸಮ್ಮೇಳನದ ಆತಿಥ್ಯ ಹಾವೇರಿಗೆ ಸಿಕ್ಕಿರುವುದು ಸೌಭಾಗ್ಯ ಅಂತಹ ಸಮಯದಲ್ಲಿ ನಗರದ ಚಿತ್ರಣ ಬರೆಯಲು ನಮ್ಮಂತ ಕಲಾವಿದರಿಗೆ ಅವಕಾಶ ಸಿಕ್ಕಿದ್ದು, ಅವಿಸ್ಮರಣೀಯ. ನಮ್ಮ ಸಾಮರ್ಥ್ಯಕಿಂತ ಹೆಚ್ಚು ಪಾಲ್ಗೊಂಡು ಹಾವೇರಿ ನಗರವನ್ನು ಸುಂದರಗೊಳಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಕಲಾವಿದರು.
ಇದನ್ನೂ ಓದಿ:86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಹಾವೇರಿಯಲ್ಲಿ ಗಣ್ಯರ ಕೊರಳೇರಲು, ಕಂಪು ಸೂಸಲು ಏಲಕ್ಕಿ ಮಾಲೆಗಳು ಸಿದ್ಧ