ನೂತನ ಉಪಸಭಾಪತಿ ರುದ್ರಪ್ಪ ಲಮಾಣಿ ಹಾವೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾವೇರಿ:''25ನೇ ಉಪಸಭಾಪತಿಯಾಗಿ ಆಯ್ಕೆ ಆಗಿದ್ದೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸುರ್ಜೇವಾಲಾ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಆದೇಶದ ಅನ್ವಯ ನನ್ನನ್ನು ಆಯ್ಕೆ ಮಾಡಲಾಗಿದೆ'' ಎಂದು ನೂತನ ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಎಲ್ಲ ಹಿರಿಯರು ಮತ್ತು ಜೆಡಿಎಸ್, ಬಿಜೆಪಿ ಹಿರಿಯರಿಗೂ ಅಭಿನಂದನೆ ಸಲ್ಲಿಸಿದರು. ನಾನು ಪ್ರತಿಪಕ್ಷ ನಾಯಕರ ಸಾಲಿನಲ್ಲಿ ಕುಳಿತುಕೊಳ್ಳುತ್ತೇನೆ. ನಾನು ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಆಗಿದ್ದರೂ ನ್ಯಾಯ ಸಮ್ಮತ ಬೇಡಿಕೆ ಈಡೇರಿಸಲು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ರುದ್ರಪ್ಪ ಲಮಾಣಿ ಹೇಳಿದರು.
ಕಾಂಗ್ರೆಸ್ ಪಕ್ಷ ಸಣ್ಣವರಿಗೂ ದೊಡ್ಡ ಸ್ಥಾನ ಕೊಟ್ಟಿದೆ:''ನಿನ್ನೆ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಿದೆ. ಬಜೆಟ್ ಅನುಷ್ಠಾನದ ವಿಚಾರದಲ್ಲಿ ನಾವು ಆಗಾಗ ಸರ್ಕಾರಕ್ಕೆ ತಿವಿಯ ಬೇಕಾಗುತ್ತದೆ. ಸರ್ಕಾರ ಎಡವಿದಾಗ ಸಭಾಪತಿಯವರು ಹಾಗೂ ನಾನು ಕೂಡಿ ಎಚ್ಚರಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷವು ಸಣ್ಣವರಿಗೂ ಕೂಡಾ ದೊಡ್ಡ ಸ್ಥಾನಗಳನ್ನು ನೀಡುತ್ತದೆ'' ಎಂದು ರುದ್ರಪ್ಪ ಆಶ್ಚರ್ಯ ವ್ಯಕ್ತಪಡಿಸಿದರು.
ಸಂತಸ ವ್ಯಕ್ತಪಡಿಸಿದ ರುದ್ರಪ್ಪ ಲಮಾಣಿ:''ಹಿಂದೆ ನಾನು ಮುಜರಾಯಿ ಇಲಾಖೆ ಸಚಿವನಾಗಿದ್ದಾಗ ಮೇಲುಕೋಟೆ ಚೆಲುವರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೆ. ಅವಾಗ ಅಲ್ಲಿಯ ಪೂಜಾರಿ ಹೇಳಿದ್ದರು, ಮೈಸೂರು ಮಹಾರಾಜರು ನಿಂತು ಪೂಜೆ ಮಾಡಿದ ಸ್ಥಳದಲ್ಲಿ ನೀವು ನಿಂತು ಪೂಜೆ ಮಾಡುತ್ತಿದ್ದೀರಿ ಎಂದು ತಿಳಿಸಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು. ನಾನು ಸಾಮಾನ್ಯ ತಾಂಡಾದಲ್ಲಿ ಜನಿಸಿದ್ದು, ನಾನು ಕೆಳಮಟ್ಟದಿಂದ ಬಂದು ಈ ಹುದ್ದೆಗೆ ಏರಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಇದು ಸಾಧ್ಯವಾಗಿದೆ'' ಎಂದು ರುದ್ರಪ್ಪ ಲಮಾಣಿ ಸಂತಸ ವ್ಯಕ್ತಪಡಿಸಿದರು.
ಎಲ್ಲ ಸಚಿವರಿಗೆ ಆದೇಶ ಮಾಡುವ ಅವಕಾಶ ಸಿಕ್ಕಿದೆ:''ನಲ್ವತ್ತು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಕೆಲಸ ಮಾಡಿದ್ದೇನೆ. ಸಭಾಪತಿ, ಉಪಸಭಾಪತಿಗಳಿಗೆ ಕೆಲುವು ನಿಯಮಗಳು ಇರುತ್ತವೆ ಎಂದು ತಿಳಿದಿದ್ದೆ. ಸದನದ ನಿಮಾವಳಿಯ ಪ್ರಕಾರ ನಡೆಯಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾರೂ ವೈರಿಗಳಲ್ಲ. ನಾವು ಎಚ್ಚರದಿಂದ ನಡೆದುಕೊಳ್ಳಬೇಕಾಗುತ್ತದೆ. ಸಚಿವ ಸ್ಥಾನ ಸಿಗದೇ ಇರಬಹುದು. ಎಲ್ಲ ಸಚಿವರಿಗೆ ಆದೇಶ ಮಾಡುವ ಅವಕಾಶ ಸಿಕ್ಕಿದೆ. ಉಪಸಭಾಪತಿ ಜವಾಬ್ದಾರಿ ಬಗ್ಗೆ ತಿಳಿದುಕೊಂಡಿದ್ದೇನೆ'' ಎಂದು ರುದ್ರಪ್ರ ಲಮಾಣಿ ಅಭಿಪ್ರಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎಂಪಿ ಎಲೆಕ್ಷನ್ವರೆಗೂ ಕಾದು ನೋಡೋಣ.. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ: ಸತೀಶ್ ಜಾರಕಿಹೊಳಿ