ಹಾವೇರಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ. ಇದು ಈ ನೆಲದ ಕಾನೂನಾಗಿದ್ದು, ಅದನ್ನು ಗೌರವಿಸುವ ಕೆಲಸ ನಮ್ಮದಾಗಬೇಕು. ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ ಎಲ್ಲವನ್ನು ವಿಚಾರಿಸಿ ತೀರ್ಪು ನೀಡುತ್ತದೆ. ಅಲ್ಲಿಯವರೆಗೆ ಹೈಕೋರ್ಟ್ ತೀರ್ಪನ್ನು ಪಾಲಿಸಬೇಕು ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಶಿಕ್ಷಣಕ್ಕೆ ಧಕ್ಕೆ ಉಂಟಾಗಬಾರದು ಎಂದು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಮತ್ತು ಅವರ ತಂದೆ-ತಾಯಿಗಳಿಗೆ ಹೇಳಿದ್ದೇವೆ. ಎಲ್ಲರೂ ಮಕ್ಕಳನ್ನ ಪರೀಕ್ಷೆಗೆ ಕಳುಹಿಸಿ, ಮಕ್ಕಳು ಭವಿಷ್ಯವನ್ನು ಶಿಕ್ಷಣದ ಮೂಲಕ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದೇವೆ ಅಂತಾ ತಿಳಿಸಿದರು.