ಹಾವೇರಿ:ವಿಧಾನಸೌಧದ ಎಲ್ಲ ಗೋಡೆಗಳು ದುಡ್ಡು ದುಡ್ಡು ಅನ್ನುತ್ತವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ. ಈ ರಾಜ್ಯದಲ್ಲಿ ದುಡ್ಡು ಯಾರ ಬಳಿ ಜಾಸ್ತಿ ಇದೆ ಅಂತಾ ಕೇಳಿದ್ರೆ, ರಾಜ್ಯದಲ್ಲಿನ ಗೋಡೆಗಳು ಹೇಳುತ್ತವೆ. ರೋಡಿನಲ್ಲಿರುವ ಲೈಟ್ ಕಂಬಗಳನ್ನು ಕೇಳಿದ್ರೂ ಹೇಳುತ್ತವೆ ಎಂದು ಸಚಿವ ಮುನಿರತ್ನ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳವಟ್ಟಿಯಲ್ಲಿ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಹೇಳಿದಂತೆ ರಾಜೀನಾಮೆ ನೀಡಿದ್ದಾರೆ. 40% ಆರೋಪ ಮಾಡ್ತಿರೋರು ಯಾರು.? ಯಾವ ಆಧಾರದಲ್ಲಿ ಇದನ್ನು ಮಾಡ್ತಿದ್ದಾರೆ. ಕೆಲವು ಸಂಘಗಳು ಆರೋಪ ಮಾಡಿದಾಕ್ಷಣ ಅದು ಒಪ್ಪಿಕೊಳ್ಳುವ ವಿಷಯವಲ್ಲ ಎಂದು ಮುನಿರತ್ನ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಸಚಿವ ಮುನಿರತ್ನ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದವರು ಯಾರು?: ಏಕಾಏಕಿ ಕಾಮಗಾರಿ ಮಾಡಿ ಹಣ ಬಿಡುಗಡೆ ಮಾಡಿ ಅಂದರೆ ಯಾವ ಆಧಾರದಲ್ಲಿ ಬಿಡುಗಡೆ ಮಾಡಲು ಆಗುತ್ತದೆ. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ಮೇಲೆ ಅವರ ಬೆನ್ನು ಬಿದ್ದವರು ಯಾರು?. ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದವರು ಯಾರು?. ಅದು ಅವರಾಗೆ ಅವರು ಸತ್ತಿರೋ ಸಾವಲ್ಲ, ಪ್ರಚೋದನೆ ಕೊಟ್ಟು ಮಾಡಿರೋದು ಎಂದು ಮುನಿರತ್ನ ಆರೋಪಿಸಿದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಒಳಸಂಚು: ಐಟಿ, ರಾಯಲ್ಟಿ, ಜಿಎಸ್ಟಿ ಎಷ್ಟು ಹೇಗೆ ಕೊಡ್ತೀರಾ.? ಯಾರ್ಯಾರಿಗೆ ಕೊಡ್ತೀರಾ 40 ಫರ್ಸೆಂಟ್. ಈ ರೀತಿ 40 ಫರ್ಸೆಂಟ್ ಅಂತಾ ಹೇಳಿ ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಒಳಸಂಚು ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ಏಜೆಂಟರು ಇದ್ದಾರೆ. ನಾಲ್ಕು ವಿಕೆಟ್ ಬೀಳುತ್ತೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ವಿಕೆಟ್ ಬೀಳಲು ಇದೇನು ಕ್ರಿಕೆಟ್ ಅಲ್ಲ. ಜನಸೇವೆ ಇದು. ಯಾವುದಕ್ಕೆ ಯಾವ ಪದ ಬಳಸಬೇಕು ಅನ್ನೋದನ್ನ ಮೊದಲು ತಿಳ್ಕೋಬೇಕು ಎಂದು ಸಲಹೆ ನೀಡಿದರು.