ಚಾಮುಂಡಿ ಎಕ್ಸಪ್ರೆಸ್ ಹೋರಿಯ ತಿಥಿ ಆಚರಿಸಿದ ಗ್ರಾಮಸ್ಥರು ಹಾವೇರಿ:ದನ ಬೆದರಿಸುವ ಸ್ಪರ್ಧೆಯಲ್ಲಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದ ಹೋರಿ ಚಾಮುಂಡಿ ಎಕ್ಸಪ್ರೆಸ್ 313 ನಿಧನವಾಗಿ 9 ದಿನಗಳಾದ ಹಿನ್ನೆಲೆ ಗ್ರಾಮಸ್ಥರೆಲ್ಲರೂ ಸೇರಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಹಾವೇರಿ ಸಮೀಪದ ಚಿಕ್ಕಲಿಂಗದಳ್ಳಿ ಗ್ರಾಮದಲ್ಲಿ ಶನಿವಾರ ಚಾಮುಂಡಿ ಎಕ್ಸಪ್ರೆಸ್ ಹೋರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚಾಮುಂಡಿ ಎಕ್ಸಪ್ರೆಸ್ ಮೆಹಬೂಬಸಾಬ್ ದೇವಗಿರಿ ಎಂಬುವರ ಮನೆಯಲ್ಲಿ ಜನಿಸಿತ್ತು.
ಈ ಹೋರಿಯು ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ದನ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿತ್ತು. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಹೋರಿಗೆ ಚಾಮುಂಡಿ ಎಕ್ಸಪ್ರೆಸ್ ಎಂದು ನಾಮಕರಣ ಮಾಡಿದ್ದರು.
ಇದೇ ಡಿಸೆಂಬರ್ 2 ರಂದು ಅನಾರೋಗ್ಯದಿಂದ ಅಸುನೀಗಿದ್ದ ಚಾಮುಂಡಿ ಎಕ್ಸಪ್ರೆಸ್ ಹೋರಿಯನ್ನು ಡಿಸೆಂಬರ್ 3 ರಂದು ಮಾಸೂರಿನ ಹೊರವಲಯದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಹೋರಿ ಅಸುನೀಗಿ 9 ದಿನಗಳಾದ ಹಿನ್ನೆಲೆಯಲ್ಲಿ ಹಾವೇರಿ ಸಮೀಪದ ಚಿಕ್ಕಲಿಂಗದಹಳ್ಳಿಯ ಗ್ರಾಮಸ್ಥರು ಚಾಮುಂಡಿ ಎಕ್ಸಪ್ರೆಸ್ ಹೋರಿಯ ತಿಥಿ ಆಚರಿಸಿದರು.
ಹೋರಿಯ ಭಾವಚಿತ್ರ ಮತ್ತು ಕಲಾವಿದ ಚಿತ್ರಿಸಿದ ಭಾವಚಿತ್ರ ಇಟ್ಟು ಪುಷ್ಪಮಾಲೆ ಹಾಕಿ ಪೂಜಿಸಲಾಯಿತು. ಚಾಮುಂಡಿ ಎಕ್ಸೆಪ್ರೆಸ್ ಹೋರಿಗೆ ಇಷ್ಟವಾದ ಮೊಟ್ಟೆ, ರಾಗಿ, ಹತ್ತಿಕಾಳು, ಗೋವಿನ ಜೋಳದ ತೆನೆಗಳನ್ನಿಡಲಾಗಿತ್ತು. ದೂರದ ಊರಿಂದ ಬಂದ ಅಭಿಮಾನಿಗಳು ಹೋರಿಗೆ ತಿಥಿ ಕಾರ್ಯದಲ್ಲಿ ಭಾಗಿಯಾದರು.
ಇದನ್ನೂ ಓದಿ:ತಾಯಿ ಬಿಟ್ಟೋಗಿದ್ದ ವೇಳೆ ಚಿಕಿತ್ಸೆ, ಆರೈಕೆ.. ಡಾಬಾ ಮಾಲೀಕನಿಗೆ ಅದೃಷ್ಟ ಲಕ್ಷ್ಮಿಯಾದ ಕೋತಿ ಮರಿ