ಹಾವೇರಿ: ನರೇಗಾ ಯೋಜನೆಯಡಿ ದೇವಿಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಲು ಗ್ರಾ.ಪಂ ಮುಂದಾಗಿದೆ. ಪ್ರಾಯೋಗಿಕವಾಗಿ ವೆಂಕಟಾಪುರದ ಬಾವಿಯನ್ನು ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪುನಶ್ಚೇತನಗೊಳಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 15 ಕೂಲಿ ಕಾರ್ಮಿಕರು 12 ದಿನ ಕೆಲಸ ಮಾಡಿ ಬಾವಿಯ ಹೂಳನ್ನು ತೆಗೆದಿದ್ದಾರೆ. ಬಾವಿಯ ಸುತ್ತಮುತ್ತ ಕಟ್ಟೆ ಕಟ್ಟಿ ಕಬ್ಬಿಣದ ಜಾಲರಿ ಹಾಕಲಾಗಿದ್ದು, ಒಂದು ಬಾವಿ ಪುನಶ್ಚೇತನಕ್ಕೆ ಮೂರು ಲಕ್ಷ ರೂಪಾಯಿ ಖರ್ಚಾಗಿದೆ. ಗ್ರಾಮಸ್ಥರು ಜಾನುವಾರುಗಳ ಮೈತೊಳೆಯಲು ಹಾಗೂ ದಿನಬಳಕೆಗೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಮಾರುತಿ ದೇವಸ್ಥಾನದ ಬಾವಿ ನೀರನ್ನೇ ಬಳಕೆ ಮಾಡುತ್ತಿದ್ದಾರೆ.
ವೆಂಕಟಾಪುರ ಗ್ರಾಮದ ತೆರೆದ ಬಾವಿ ಪುನಶ್ಚೇತನ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮಸ್ಥರು, ಬಾವಿ ಪುನಶ್ಚೇತನ ಮಾಡಿರುವುದು ಸಂತಸ ತಂದಿದೆ. ಕೊಳವೆ ಬಾವಿಗಳಿಗೆ ವಿದ್ಯುತ್ ಬೇಕು. ಆದರೆ, ತೆರೆದ ಬಾವಿಗೆ ವಿದ್ಯುತ್ ಬೇಡ. ತೆರೆದ ಬಾವಿಯಲ್ಲಿ ದೈಹಿಕ ಶಕ್ತಿ ಬಳಸಿ ನೀರು ತುಂಬಬಹುದು. ಇದರಿಂದಾಗಿ ನಮಗೆ ವ್ಯಾಯಾಮಗುತ್ತದೆ ಎಂದರು.
ವೆಂಕಟಾಪುರದ ಗ್ರಾಮದ ಮಾರುತಿ ದೇವಸ್ಥಾನದ ತೆರೆದ ಬಾವಿ ನೀರನ್ನ ಸದ್ಯಕ್ಕೆ ದಿನ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿದೆ. ಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಅದಕ್ಕೆ ಇದೇ ಬಾವಿಯಿಂದ ನೀರು ಪೂರೈಸುವ ಯೋಜನೆ ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:'ಭಾರತ ನನ್ನದಾಗಲೀ, ಠಾಕ್ರೆ, ಮೋದಿ, ಶಾ ಅವರದ್ದೂ ಅಲ್ಲ, ಆದ್ರೆ ಇವರದ್ದು' ಎಂದ ಓವೈಸಿ