ರಾಣೇಬೆನ್ನೂರ :ತಾಲೂಕಿನಲ್ಲಿ ಒಂದು ವಾರದಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದೆ. ರೈತರು ತಮ್ಮ ದೈನಂದಿನ ಕೆಲಸ ಬಿಟ್ಟು ಇಂದು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ.
ರಾಣೇಬೆನ್ನೂರ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬೆಳೆಗಳಿಗೆ ತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕಿದೆ. ಈ ಕಾರಣಕ್ಕೆ ರೈತರು ಗೊಬ್ಬರ ಪಡೆಯಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ.
ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಕಳೆದ ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ಸರತಿ ನಿಲ್ಲುತ್ತಿರುವ ರೈತರು, ಗೊಬ್ಬರ ಬಾರದೆ ನಿರಾಸೆಯಿಂದಿದ್ದರು. ಇಂದು ನಗರದ ಎಪಿಎಂಸಿ ಸೊಸೈಟಿಗೆ ಗೊಬ್ಬರ ಬಂದಿತ್ತು. ರೈತರು ಸಾಲಿನಲ್ಲಿ ನಿಂತು ಮೊದಲು ಬಂದವರು ತಲಾ 4 ಚೀಲ ಯೂರಿಯಾ ಗೊಬ್ಬರವನ್ನು ಕೊರೊನಾ ಆತಂಕ ನಡುವೆ ಪರದಾಡಿ ತಗೆದುಕೊಂಡು ಹೋದರು.
ಶಾಸಕರೆ ರೈತರ ಬಗ್ಗೆ ಕಾಳಜಿವಹಿಸಿ :ರಾಣೇಬೆನ್ನೂರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಬೆಳಗ್ಗೆ ಯೂರಿಯಾ ಗೊಬ್ಬರ ಅವಶ್ಯಕವಾಗಿದೆ. ಈ ನಡುವೆ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆಯಾಗಿದೆ. ಇದರ ನಡುವೆ ಕೆಲ ಖಾಸಗಿ ಅಂಗಡಿಯವರು ಗೋದಾಮಿನಲ್ಲಿ ಸಂಗ್ರಹಿಸಿ ಒಂದು ಚೀಲಕ್ಕೆ 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರ ಆರೋಪವಾಗಿದೆ. ಇದರ ಬಗ್ಗೆ ರಾಣೇಬೆನ್ನೂರ ಶಾಸಕರು ಹಾಗೂ ಇದೇ ಜಿಲ್ಲೆಯವರಾದ ಕೃಷಿ ಸಚಿವ ಬಿ ಸಿ ಪಾಟೀಲ್‌ರು ಗಮನಹರಿಸಿ, ರೈತರ ಯೂರಿಯಾ ಗೊಬ್ಬರ ಸಮಸ್ಯೆಯನ್ನ ಪರಿಹರಿಸಬೇಕಿದೆ.