ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರಕ್ಕೆ ಮತ ನೀಡಿದರೆ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ: ಕೇಂದ್ರ ಗೃಹ ಸಚಿವ ಅಮಿತ್ ಶಾ - ಈಟಿವಿ ಭಾರತ್ ಕನ್ನಡ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಬಡಜನರ ಏಳಿಗೆಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ

By

Published : Apr 29, 2023, 1:03 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ

ಹಾವೇರಿ/ದಾವಣಗೆರೆ :ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದೆ. ಜೆಡಿಎಸ್ ಕಾಂಗ್ರೆಸ್ ಬಿ ಟೀಮ್ ಇದ್ದಂತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ನಡೆದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಅಭ್ಯರ್ಥಿ ಗೆದ್ದರೆ ಅವರು ಫಲಿತಾಂಶ ಬರುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ನಂತರ ಕಾಂಗ್ರೆಸ್ ಬಳಿ ಹೋಗುತ್ತಾರೆ. ಜೆಡಿಎಸ್​ಗೆ ವೋಟ್ ನೀಡಿದರೆ ಅದು ಕಾಂಗ್ರೆಸ್‌ಗೆ ಮತಹಾಕಿದಂತೆ ಎಂದು ಅಮಿತ್ ಶಾ ತಿಳಿಸಿದರು.

ಕಾಂಗ್ರೆಸ್‌ಗೆ ವೋಟ್ ಹಾಕಿದರೆ ಮತ್ತೆ ಪಿಎಫ್ಐ ಮೇಲಿನ ಬ್ಯಾನ್​​ ತೆಗೆಯುತ್ತಾರೆ. ಈ ಚುನಾವಣೆ ಡಬಲ್ ಇಂಜಿನ್ ಮತ್ತು ರಿವರ್ಸ್ ಗೇರ್‌ನಲ್ಲಿರುವ ಸರ್ಕಾರಗಳ ಮಧ್ಯೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಆ ಸರ್ಕಾರ ಮತ್ತು ಕೇಂದ್ರದ ಮೋದಿ ಸರ್ಕಾರ ಎರಡು ಸೇರಿ ಕರ್ನಾಟಕವನ್ನ ಮತ್ತಷ್ಟು ಸುರಕ್ಷಿತ ಮಾಡುತ್ತೇವೆ. ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ. ಇಲ್ಲಿಯ ಬಡಜನರ ಏಳಿಗೆಯಾಗುತ್ತೆ . ಪಿಎಫ್ಐ ಸಂಘಟನೆ ಕಳಿಸಿದಂತೆ ಉಳಿದ ದೇಶದ್ರೋಹಿ ಸಂಘಟನೆಗಳನ್ನ ನಿಷೇಧ ಮಾಡುತ್ತೇವೆ. ಅದರ ಸದಸ್ಯರನ್ನ ಜೈಲಿಗೆ ಅಟ್ಟುತ್ತೇವೆ ಎಂದು ಅಮಿತ್ ಶಾ ತಿಳಿಸಿದರು.

ಕಾಂಗ್ರೆಸ್‌ಗೆ ಕರ್ನಾಟಕ ದೆಹಲಿ ಸರ್ಕಾರದ ಎಟಿಎಂ ಇದ್ದಂತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಹಣ
ದೆಹಲಿಯ ಖಜಾನೆಗೆ ಹೋಗುತ್ತೆ. ಪ್ರಭುದ್ಧ ಮತದಾರರೇ ನೀವು ಆಯ್ಕೆ ಮಾಡಿ. ನಿಮಗೆ ಅಭಿವೃದ್ಧಿ ಸರ್ಕಾರ ಬೇಕಾ? ಇಲ್ಲ ರಾಜ್ಯವನ್ನ ಎಟಿಎಂ ಮಾಡಿಕೊಳ್ಳುವ ರಾಹುಲ್ ಗಾಂಧಿ ಸರ್ಕಾರ ಬೇಕಾ? ಎಂದು ಅಮಿತ್ ಶಾ ಪ್ರಶ್ನಿಸಿದರು.

ಬಿಜೆಪಿ ದೇಶದಲ್ಲಿನ ಭಯೋತ್ಪಾದನೆಯನ್ನ ಕಿತ್ತು ಎಸೆದಿದೆ. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ವಿವಿಧೆಡೆ ಸರಣಿ ಬಾಂಬ್ ಸ್ಪೋಟದ ಹಿಂದೆ ಪಿಎಫ್‌ಐ ಕೈವಾಡ ಶಂಕೆ ಇದೆ. ಕಾಂಗ್ರೆಸ್ ಪಕ್ಷ ಪಿಎಫ್ಐ ನಿಷೇಧ ಮಾಡಲಿಲ್ಲ. ಆದರೆ ಬಿಜೆಪಿ ಪಿಎಫ್ಐ ಸಂಘಟನೆ ನಿಷೇಧ ಮಾಡಿ ಅದರ ನಾಯಕರನ್ನ ಜೈಲಿಗೆ ಕಳುಹಿಸಿದೆ ಎಂದು ಅಮಿತ್ ಶಾ ತಿಳಿಸಿದರು.

ದೇಶದಲ್ಲಿ ಅಘಾತಕಾರಿ ಘಟನೆಗಳಾದ ಬಾಂಬ್ ಸ್ಪೋಟ ಪ್ರಕರಣಗಳನ್ನ ಕೇಂದ್ರ ಸರ್ಕಾರ ಎನ್ಐಎ ತನಿಖೆಗೆ ನೀಡಿದೆ. ಕಾಂಗ್ರೆಸ್ ತುಷ್ಠೀಕರಣ ರಾಜಕೀಯ ಮಾಡುತ್ತಿದ್ದ ಅದು ಪಿಎಫ್ಐ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಮಿತ್ ಶಾ ಆರೋಪಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಸರ್ಕಾರವಿದ್ದಾಗ ಪಾಕ್‌ ನಿಂದ ಭಯೋತ್ಪಾದನಾ ದಾಳಿಯಾಗುತ್ತಿತ್ತು. ಬಾಂಬ್ ದಾಳಿಯಾಗುತ್ತಿತ್ತು. ಅವಾಗ ನಮ್ಮ ಸೈನಿಕರ ಮೇಲೆ ಗುಂಡುಹಾರಿಸಲಾಗುತ್ತಿತ್ತು.

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಿಂದ ಅಂತಹ ದಾಳಿಮೇಲೆ ಕಾಂಗ್ರೆಸ್ ಯಾವಾಗಲೂ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರಲಿಲ್ಲ. ನೀವು ನರೇಂದ್ರ ಮೋದಿಯನ್ನ ಪ್ರಧಾನಿ ಮಾಡಿದ್ರಿ. ಕೇವಲ 10 ದಿನದಲ್ಲಿ ಪ್ರಧಾನಿ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್​ಸ್ಟ್ರೈಕ್ ಮಾಡಿ ಭಯೋತ್ಪಾದನೆ ಹತ್ತಿಕ್ಕಲು ಕ್ರಮ ಕೈಗೊಂಡಿತು ಎಂದರು.

ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಮತ್ತೆ ಮುಸ್ಲಿಂರಿಗೆ ಮೀಸಲಾತಿ ನೀಡ್ತಾರೆ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾವು ರದ್ದು ಮಾಡಿದ 04% ಮೀಸಲಾತಿ ಮತ್ತೆ ಮುಸ್ಲಿಂರಿಗೆ ನೀಡ್ತಾರೆಂದು ಘೋಷಣೆ ಮಾಡಿದ್ದಾರೆ. ಲಿಂಗಾಯತ, ದಲಿತ, ಒಕ್ಕಲಿಗರ ಮೀಸಲಾತಿ ಕಿತ್ತು ಕೊಡ್ತೀರಾ? ಎಂದು ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ಪ್ರಶ್ನೆ ಮಾಡಿದ್ರು.

ದಾವಣಗೆರೆ ಜಿಲ್ಲೆಯ ಹರಿಹರದ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮತ ನೀಡಿದ್ರೆ ಮೋದಿ ಅವರ ಡಬಲ್ ಇಂಜಿನ್ ಸರ್ಕಾರದ ಕೈಗೆ ಹೋಗುತ್ತದೆ. ಆದರೆ ನಿಮ್ಮ ಮತ ರಾಹುಲ್ ಬಾಬಾ ಕೈಗೆ ಹೋದ್ರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಪಿಎಫ್​ಐ ನಂತಹ ಸಂಘಟನೆ ಬೆಳೆಸಿದ್ದು ಕಾಂಗ್ರೆಸ್. ನರೇಂದ್ರ ಮೋದಿ ಪಿಎಫ್ಐಗೆ ಪಾಠ ಕಲಿಸಿದರು. ಅದರ ಪ್ರಮುಖ ನಾಯಕರನ್ನು ಜೈಲಿಗೆ ಹಾಕಿದ್ದಾರೆ ಎಂದರು.

ನಮ್ಮ ಸರ್ಕಾರ ರಾಜ್ಯದಲ್ಲಿ 43 ಲಕ್ಷ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಿದೆ. ಕಾಂಗ್ರೆಸ್ ಬಡವರಿಗೆ ಏನೂ ಮಾಡಿಲ್ಲ. 37 ಲಕ್ಷ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಉಚಿತವಾಗಿ ನೀಡಲಾಗಿದೆ. ರಾಹುಲ್ ಬಾಬಾ ಹೇಳುತ್ತಿದ್ದರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು. ಆದ್ರೆ ರಾತ್ರಿ ವೇಳೆ ಹೋಗಿ ಕೊರೊನಾ ಲಸಿಕೆ ಹಾಕಿಸಿಕೊಂಡರು ರಾಹುಲ್ ಬಾಬಾ ಎಂದು ವ್ಯಂಗ್ಯ ಮಾಡಿದ್ರು.

ಇದನ್ನೂ ಓದಿ :ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ..!

ABOUT THE AUTHOR

...view details