ಹಾವೇರಿ : ಉತ್ತರಕರ್ನಾಟಕ ಅಭಿವೃದ್ಧಿಯಾಗದಿರುವ ನೋವು ಉಮೇಶ ಕತ್ತಿಗಿದೆ. ಆ ನೋವು ಅವರನ್ನು ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿ ಎತ್ತುವಂತೆ ಮಾಡಿದೆ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಚಿವ ಉಮೇಶ್ ಕತ್ತಿ ಕಳೆದ 10 ವರ್ಷಗಳಿಂದ ಪ್ರತ್ಯೇಕ ರಾಜ್ಯದ ಧ್ವನಿ ಎತ್ತುತ್ತಿದ್ದಾರೆ. ಸಹಜವಾಗಿ ಮಗನಿಗೆ ಮಲತಾಯಿ ಧೋರಣೆಯಾದಾಗ ಮಗ ಪ್ರತ್ಯೇಕ ಮನೆ ಮಾಡುತ್ತಾನೆ. ಇದರ ಉದ್ದೇಶ ಪ್ರತ್ಯೇಕ ರಾಜ್ಯ ಮಾಡುವುದಾಗಿರುವುದಿಲ್ಲಾ. ಬದಲಾಗಿ ಆ ನೋವು ಈ ರೀತಿ ಮಾತನಾಡುವಂತೆ ಮಾಡುತ್ತದೆ ಎಂದು ತಿಳಿಸಿದರು.
ಉತ್ತರಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಿ :ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಬದಲು ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಿ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಆಶಯ. ಅಖಂಡ ಕರ್ನಾಟಕಕ್ಕೆ ಬಹಳಷ್ಟು ಮುಖಂಡರು ಹೋರಾಟ ಮಾಡಿದ್ದಾರೆ. ಅವರ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು. ಸರ್ಕಾರವೂ ಇದನ್ನು ಅರಿಯಬೇಕು. ನಾವು ಅಖಂಡ ಕರ್ನಾಟಕ ಬಯಸುತ್ತೇವೆ ಎಂದು ನಮ್ಮನ್ನು ತುಳಿಯುವ ಪ್ರಯತ್ನ ಮಾಡಬಾರದು ಎಂದು ಶ್ರೀಗಳು ತಿಳಿಸಿದರು.
ಏನೆಂದರೆ ಆಕ್ರೋಶದ ಕಟ್ಟೆ ಒಡೆದರೆ ಮುಂದೆ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲಾ. ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ವರ್ಗಾವಣೆ ಮಾಡಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು. ನಂಜುಂಡಸ್ವಾಮಿ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು. ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವ ಸಂದರ್ಭ ಇದಲ್ಲಾ. ಉಮೇಶ ಕತ್ತಿ ನೋವಿನಿಂದ ಈ ರೀತಿ ಹೇಳಿದ್ದಾರೆ. ಅವರ ನೋವು ಶಮನಮಾಡುವ ಕಾರ್ಯ ಮಾಡಿದಾಗ ಈ ರೀತಿಯ ಧ್ವನಿ ಬರಲು ಸಾಧ್ಯವಿಲ್ಲ ಎಂದು ಶ್ರೀಗಳು ತಿಳಿಸಿದರು.