ಹಾವೇರಿ:ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಒಂದು ವಿಶಿಷ್ಟ ದೇವಸ್ಥಾನವಿದೆ. ಸ್ಥಳೀಯವಾಗಿ ಭೂತೇಶ್ವರನಗರ ಎಂದು ಕರೆಯಲ್ಪಡುವ ಇಲ್ಲಿ ಭೂತೇಶ್ವರ ಹಾಗೂ ಚೌಡೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ವಿಶಿಷ್ಟವಾದ ಆಚರಣೆಯೊಂದು ನಡೆದುಕೊಂಡು ಬಂದಿದೆ.
ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಬೀಗ ಹಾಕುವ ಭಕ್ತರು ಭಕ್ತರು ಇಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವಸ್ಥಾನದ ಆವರಣದಲ್ಲಿ ಬೀಗ ಹಾಕಿ ಹರಕೆ ಕಟ್ಟುತ್ತಾರೆ. ತಮ್ಮ ಬೇಡಿಕೆ ಈಡೇರಿದರೆ ಬೇಗ ಬಂದು ಹರಕೆ ತೀರಿಸುವುದಾಗಿ ಬೇಡಿಕೊಳ್ಳುತ್ತಾರೆ. ಬೀಗ ಹಾಕಿ ಹೋದ ನಂತರ ತಮ್ಮ ಇಷ್ಟಾರ್ಥ ಸಿದ್ದಿಸುತ್ತಿದ್ದಂತೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಾವು ಹಾಕಿದ ಬೀಗ ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅಲ್ಲದೇ ತಾವು ಹೇಳಿಕೊಂಡಂತೆ ಕಾಣಿಕೆ ಸಲ್ಲಿಸುತ್ತಾರೆ.
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಪ್ರಸ್ತುತ ದೇವಸ್ಥಾನದ ಜೀರ್ಣೋದ್ದಾರವಾಗುತ್ತಿದೆ. ದೇವಸ್ಥಾನಕ್ಕೆ ಭಕ್ತರು ಹಾಕಿದ ಬೀಗಗಳ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ. ಈ ಬೀಗಗಳನ್ನೆಲ್ಲಾ ದೇವಸ್ಥಾನದ ಅರ್ಚಕರು ಸಂರಕ್ಷಿಸಿದ್ದಾರೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಇಲ್ಲಿಗೆ ಭಕ್ತರ ದಂಡೆ ಹರಿದು ಬರುತ್ತದೆ. ಭಾನುವಾರ ಮತ್ತು ಗುರುವಾರ ಭೂತೇಶ್ವರ ವಾರ ಮತ್ತು ಮಂಗಳವಾರ ಮತ್ತು ಶುಕ್ರವಾರ ಚೌಡೇಶ್ವರ ವಾರ ಈ ದಿನಗಳಂದು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಈ ದೇವರ ಮತ್ತೊಂದು ವಿಶೇಷತೆ ಎಂದರೆ ದೇವಸ್ಥಾನದಲ್ಲಿ ಯಾವುದೇ ಮೂರ್ತಿಗಳಿಲ್ಲ. ಬದಲಿಗೆ ಅರ್ಚಕರು ಭಕ್ತರು ತಂದ ನಿಂಬೆ ಹಣ್ಣನ್ನು ತ್ರಿಶೂಲಕ್ಕೆ ಅರ್ಪಿಸಿ ಭಕ್ತರಿಗೆ ವಾಪಸ್ ನೀಡುತ್ತಾರೆ. ಭೂತೇಶ್ವರನ ಮುಖವಾಡವನ್ನೇ ಇಲ್ಲಿ ಪೂಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಭಕ್ತರು ಸಹ ಈ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿ ಬೀಗ ಹಾಕುತ್ತಿದ್ದಂತೆ ಸಮಸ್ಯೆಗಳು ಮಾಯವಾಗುತ್ತವೆ ಎನ್ನುವುದು ಭಕ್ತರ ನಂಬಿಕೆ.
ಇದನ್ನೂ ಓದಿ:'ಮುದ್ರಣಕಾಶಿ' ಗದಗದಲ್ಲಿ ನಿರ್ಮಾಣವಾಗುತ್ತಿರುವ ರಥಗಳಿಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ