ಹಾವೇರಿ :ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಹಗಲು ಹೊತ್ತಿನಲ್ಲಿ ಹೊಂಚು ಹಾಕಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದ ಸಚಿನ್ ಸಂಕ್ಲಿಪುರ (24) ಮತ್ತು ಉಡಚಪ್ಪ ದಿಪಾಳಿ (25) ಎಂದು ಗುರುತಿಸಲಾಗಿದೆ. ಸುಮಾರು 4,65,000 ಲಕ್ಷ ಮೌಲ್ಯದ 13 ಬೈಕ್‌ಗಳ ಜಪ್ತಿ ಮಾಡಿ, ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಬಸ್ ನಿಲ್ದಾಣ, ಹೋಟೆಲ್, ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆ ನಿಲ್ಲಿಸಿದ್ದ ಬೈಕಗಳನ್ನು ಕಳ್ಳತನ ಮಾಡಿದ್ದರು. ಹಾವೇರಿ ನಗರದಲ್ಲಿ ಇತ್ತೀಚೆಗೆ ಬೈಕ್‌ಗಳ ಕಳ್ಳತನ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ಹಾವೇರಿ ಎಸ್ಪಿ ಅಂಶುಕುಮಾರ್ ಹಾವೇರಿ ನಗರ ಠಾಣೆಯ ಸಿಪಿಐ ಮೋತಿಲಾಲ್ ಪವಾರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ಜಿಲ್ಲೆಯಾದ್ಯಂತ ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು.
ಆರೋಪಿಗಳು ಹೆಲ್ಮೆಟ್ ತಪಾಸಣೆ ವೇಳೆ ಅನುಮಾನಕಾರವಾಗಿ ವರ್ತಸಿದ್ದರು. ಇದನ್ನರಿತ ತಂಡ ಹೆಚ್ಚಿನ ವಿಚಾರಣೆ ನಡೆಸಿದಾಗ ಬೈಕ್‌ಗಳ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದು, ಕದ್ದ ಬೈಕ್‌ಗಳನ್ನು ಕಡಿಮೆ ಹಣಕ್ಕೆ ಮಾರುತ್ತಿದ್ದರು. ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುವವರು ಎಲ್ಲ ದಾಖಲಾತಿಗಳ ಪರಿಶೀಲಿಸಿ ನಡೆಸಿದ ನಂತರ ಬೈಕ್ ಖರೀದಿ ಮಾಡಬೇಕು. ಯಾವುದಾದರೂ ವ್ಯಕ್ತಿ ಕಡಿಮೆ ಹಣಕ್ಕೆ ದಾಖಲಾತಿಗಳಿಲ್ಲದ ಬೈಕ್ ಮಾರಾಟ ಮಾಡುತ್ತಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಅಲ್ಲದೆ ಬೈಕ್‌ಗಳನ್ನು ನಿಲ್ಲಿಸಿ ಹೋಗುವಾಗ ಹ್ಯಾಂಡಲ್ ಲಾಕ್ ಮಾಡಿ ಪರಿಚಯದವರ ಅಂಗಡಿ ಮನೆಗಳ ಮುಂದೆ ಇರಿಸಿ ಹೋಗಬೇಕು. ಇಲ್ಲವೇ ಕೆಲವು ಕಡೆ ಹಣ ಪಾವತಿಸಿದ ಪಾರ್ಕಿಂಗ್ ಲಾಟ್‌ಗಳಲ್ಲಿ ಬೈಕ್ ನಿಲ್ಲಿಸಿ ಹೋದರೆ ಸೂಕ್ತ ಎಂದು ಹಾವೇರಿ ನಗರ ಸಿಪಿಐ ಮೋತಿಲಾಲ್ ಪವಾರ್ ಸಲಹೆ ನೀಡಿದ್ದಾರೆ. ತಂಡದ ಕಾರ್ಯಾಚರಣಿಗೆ ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.