ಹಾವೇರಿ :ಹಾವೇರಿ ಜಿಲ್ಲೆಯ ರೈತರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು ತುಂಗಾ ಮೇಲ್ದಂಡೆ ಯೋಜನೆ. ಈ ಯೋಜನೆ ಹಾವೇರಿ ಜಿಲ್ಲೆಯ ರೈತರಿಗೆ ವರದಾನ ಎನ್ನಲಾಗಿತ್ತು. ಆದರೆ, ಹಾವೇರಿ ಜಿಲ್ಲೆಯ ರೈತರಿಗೆ ವರದಾನವಾಗಬೇಕಿದ್ದ ಯೋಜನೆ ಶಾಪವಾಗಿ ಪರಿಣಮಿಸಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಹಿರೇಕೆರೂರು,ರಾಣೆಬೆನ್ನೂರು,ಹಾವೇರಿ ಹಾನಗಲ್ ತಾಲೂಕುಗಳಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಡಿ ಕಾಲುವೆ ನಿರ್ಮಿಸಲಾಗಿದೆ. ಯೋಜನೆಗಾಗಿ ಈ ಹಿಂದೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಈ ರೀತಿ ಸ್ವಾಧೀನಪಡಿಸಿಕೊಂಡ ರೈತರಿಗೆ ಯಾವುದೇ ಸಮರ್ಪಕ ಪರಿಹಾರ ಕೊಟ್ಟಿಲ್ಲ.
ಇನ್ನು ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಪರಿಹಾರ ಸಿಕ್ಕಿದ್ದು ಬಿಟ್ಟರೇ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಹಲವು ರೈತರು ಅಸುನೀಗಿದ್ದಾರೆ. ಆದರೆ ಪರಿಹಾರ ಮಾತ್ರ ಮರಿಚೀಕೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಕಾಲುವೆಯನ್ನು ಕೆಲವು ಕಡೆ ಅವೈಜ್ಞಾನಿಕ ನಿರ್ಮಿಸಲಾಗಿದ್ದು, ನೀರು ಸರಾಗವಾಗಿ ಹರಿಯದೇ ಕಾಲುವೆಯಲ್ಲಿ ನಿಲ್ಲುತ್ತಿದೆ. ಮುಖ್ಯಕಾಲುವೆಗಳ ಕಾಮಗಾರಿ ಮುಗಿದಿದ್ದು ಉಪಕಾಲುವೆಗಳ ನಿರ್ಮಾಣ ಇನ್ನೂ ಮಾಡಲಾಗಿಲ್ಲ. ಇದರಿಂದ ನೀರು ಬೇಕಾದ ರೈತರಿಗೆ ಕಾಲುವೆಯಿಂದ ನೀರು ಸಿಗುತ್ತಿಲ್ಲ.