ಹಾವೇರಿ: ಏಲಕ್ಕಿ ಕಂಪಿನ ನಗರ ಎಂದೇ ಹಾವೇರಿ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಸಾಂಪ್ರದಾಯಿಕ ಏಲಕ್ಕಿ ಮಾಲೆಗಳು ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ಗಣ್ಯರ ಕೊರಳೇರಿವೆ. ಅಮೆರಿಕ ಅಧ್ಯಕ್ಷ ಹಾಗೂ ಬ್ರಿಟನ್ ಪ್ರಧಾನಿ ಸುನಕ್ ಕೊರಳು ಅಲಂಕರಿಸಿರುವ ಖ್ಯಾತಿ ಕೂಡ ಹಾವೇರಿ ಏಲಕ್ಕಿ ಮಾಲೆಗಿದೆ.
ಏಲಕ್ಕಿ ಕಂಪಿನ ನಗರಿ ಖ್ಯಾತಿ: ಈ ಹಿಂದೆ ಇಲ್ಲಿಯ ವ್ಯಾಪಾರಿಗಳು ಕಾಸರಗೋಡು ಹಾಗೂ ಕೇರಳದಿಂದ ಏಲಕ್ಕಿ ಮೊಗ್ಗುಗಳನ್ನು ತರಿಸಿಕೊಂಡು ಅದನ್ನು ಹುಬ್ಬಿ ಹಾಕಿ ಸಂಸ್ಕರಣೆ ಮಾಡುತ್ತಿದ್ದರು. ಈ ರೀತಿ ಸಂಸ್ಕರಿಸಿದ ಏಲಕ್ಕಿಗಳನ್ನು ನಗರದ ರಸ್ತೆಗಳಲ್ಲಿ ಒಣಗಲು ಹಾಕುತ್ತಿದ್ದರು. ರಸ್ತೆ ಇಕ್ಕೆಲಗಳಲ್ಲಿ ಒಣಗಲು ಹಾಕುತ್ತಿದ್ದ ಏಲಕ್ಕಿಗಳಿಂದ ದಾರಿಹೋಕರಿಗೆ ಏಲಕ್ಕಿಯ ಕಂಪು ಗಮ್ಮೆನ್ನುತ್ತಿತ್ತು. ಈ ಕಾರಣದಿಂದ ಹಾವೇರಿಗೆ 'ಏಲಕ್ಕಿ ಕಂಪಿನ ನಗರ' ಎಂಬ ಹೆಸರು ಬಂದಿದೆ ಎಂಬುವುದು ಪ್ರತೀತಿ.
ಕಸುಬು ಮಾಡಿಕೊಂಡ ಕುಟುಂಬಗಳು:ಈ ರೀತಿ ಒಣಹಾಕಲಾಗುತ್ತಿದ್ದ ಏಲಕ್ಕಿಗಳನ್ನು ತೆಗೆದುಕೊಂಡ ಕೆಲ ಕುಟುಂಬಗಳು ಏಲಕ್ಕಿ ಮಾಲೆ ತಯಾರಿಸಲು ಆರಂಭಿಸಿದ್ದರು. ಮೊದ ಮೊದಲು ಸ್ಥಳೀಯರಿಗೆ ಇಷ್ಟವಾಗಿದ್ದರಿಂದ ಏಲಕ್ಕಿ ಮಾಲೆ ತಯಾರಿಸುವುದನ್ನ ಕೆಲ ಕುಟುಂಬಗಳು ಕಸುಬು ಮಾಡಿಕೊಂಡವು. ಆರಂಭದಲ್ಲಿ ಏಲಕ್ಕಿಗಳಿಂದ ತಯಾರಾಗುತ್ತಿದ್ದ ಮಾಲೆಗಳಿಗೆ ಅದರಲ್ಲಿ ವಿವಿಧ ಡಿಸೈನ್‌ಗಳು, ಗೊಂಡೆಗಳು, ಎಸಳುಗಳು ಹಾಗೂ ಮಿಂಚುಗಳನ್ನು ಸೇರಿಸಿ ಇನ್ನಷ್ಟು ಸುಂದರಗೊಳಿಸಿದರು. ದೂರದ ಕೇರಳ, ಕಾಸರಗೊಡು ಸೇರಿದಂತೆ ವಿವಿಧಡೆಯಿಂದ ಏಲಕ್ಕಿ ತಂದು ಅದರಲ್ಲಿ ಅತ್ಯುತ್ತಮ ಗುಣಮಟ್ಟದ ಏಲಕ್ಕಿ ಆಯ್ದು ಮಾಲೆ ತಯಾರಿಸಲು ಆರಂಭಿಸಿದರು.
ದೇಶ-ವಿದೇಶಗಳಿಗೆ ಹರಡಿದ ಏಲಕ್ಕಿ ಕಂಪು:ಆರಂಭದಲ್ಲಿ ಅಷ್ಟೇನೂ ದುಬಾರಿಯಲ್ಲದ ಏಲಕ್ಕಿ ಮಾಲೆಗಳನ್ನು ಸ್ಥಳೀಯರು ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಬಳಿಕ ಹಾವೇರಿ ಏಲಕ್ಕಿ ಮಾಲೆಯ ಕಂಪು ದೇಶ-ವಿದೇಶಗಳಿಗೆ ಹರಡಿತು. ಹಾವೇರಿಗೆ ಯಾರಾದರೂ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದರೆ ಅವರಿಗೆ ಏಲಕ್ಕಿ ಮಾಲೆ ಹಾಕುವ ಸಂಪ್ರದಾಯ ಬೆಳೆದು ಬಂತು. ಈ ರೀತಿಯ ಮಾಲೆಗಳನ್ನು ತಯಾರಿಸುವ ಕೆಲ ಕುಟುಂಬಗಳ ನಡುವೆ ಪಟವೇಗಾರ ಕುಟುಂಬ ಅತಿಹೆಚ್ಚು ಮಾಲೆಗಳನ್ನು ತಯಾರಿಸುವದಲ್ಲದೇ, ವೈವಿಧ್ಯಮಯ ಮಾಲೆಗಳನ್ನು ತಯಾರಿಸುತ್ತಾ ಬಂದಿವೆ. ಇದಕ್ಕಾಗಿ ಈ ಕುಟುಂಬಕ್ಕೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.