ಟೊಮೆಟೋಗೆ ಬಂಗಾರದ ಬೆಲೆ.. ತಂತ್ರಜ್ಞಾನದ ಮೊರೆಹೋದ ವ್ಯಕ್ತಿ, ಸಿಸಿಟಿವಿ ಕಣ್ಗಾವಲಿನಲ್ಲಿ ವ್ಯಾಪಾರ! ಹಾವೇರಿ: ಒಂದು ಸಮಯದಲ್ಲಿ ಟೊಮೆಟೋಗೆ ಬೆಲೆ ಇಲ್ಲದೆ, ರೈತರು ಕಂಗಾಲಾಗಿದ್ದರು. ಎಷ್ಟೋ ಬಾರಿ ದರ ಪಾತಾಳಕ್ಕೆ ಕುಸಿದ ಪರಿಣಾಮ ಬೇಸತ್ತು ಅನ್ನದಾತರು ಮತ್ತು ವ್ಯಾಪಾರಿಗಳು ರಸ್ತೆಗೆ ಸುರಿಯುತ್ತಿದ್ದರು. ಇನ್ನೂ ಕೆಲವೆಡೆ ಟೊಮೆಟೊವನ್ನು ರೈತರು ತಿಪ್ಪೆಗೆ ಸುರಿದಿದ್ದರು. ಮತ್ತೆ ಕೆಲವರು ಅದನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುವುದು ಮಾರಾಟದ ದರ ಕೈಸೇರದೆ ನಷ್ಟವೇ ಹೆಚ್ಚಾಗಿರುತ್ತೆ ಎಂದು ಹೊಲದಲ್ಲೇ ಬಿಟ್ಟರೆ ಗೊಬ್ಬರವಾಗುತ್ತೆ ಅಂತಾ ತಮ್ಮ ಕೈಯಾರೆ ನೆಲಸಮ ಮಾಡಿದ್ದು ಉಂಟು..
ಹೌದು, ನಾವ್ ಇಷ್ಟೆಲ್ಲ ಹೇಳಿದ್ದು ಅನೇಕ ಬಾರಿ ನಡೆದ ನೈಜ ಘಟನೆಗಳ ಬಗ್ಗೆ.. ಆದ್ರೆ ಪ್ರಸ್ತುತ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ತರಕಾರಿ ಮಾರುಕಟ್ಟೆ ಇತಿಹಾಸದಲ್ಲೇ ಹಿಂದೆಂದು ಕಾಣದಷ್ಟು ದರ ಟೊಮೆಟೊಗೆ ನಿಗದಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೆಜಿ ಟೊಮೆಟೋಗೆ ಬರೋಬ್ಬರಿ 150 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಸಿಸಿಟಿವಿ ಕಣ್ಗಾವಲಿನಲ್ಲಿ ಟೊಮೆಟೋ ವ್ಯಾಪಾರ.. ಯಾವುದೇ ತರಕಾರಿ ಬೆಲೆ ಜಾಸ್ತಿ ಇದ್ದಾಗ ಅದರ ರಕ್ಷಣೆ ಸಹ ರೈತರು ಮತ್ತು ವ್ಯಾಪಾರಿಗಳು ಹರಸಾಹಸ ಪಡುತ್ತಾರೆ ಅಂತೆಯೇ ಜಿಲ್ಲೆಯ ವ್ಯಾಪಾರಿಯೊಬ್ಬರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ವ್ಯಾಪಾರ ಮಾಡುವ ಸ್ಥಳದಲ್ಲಿ ಟೊಮೆಟೋ ಬುಟ್ಟಿಯಲ್ಲಿ ಸಿಸಿಟಿವಿಯನ್ನು ಇಟ್ಟಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ದಿನದಿಂದ ದಿನಕ್ಕೆ ಟೊಮೆಟೋ ದರ ಗಗನಮುಖಿಯಾಗುತ್ತಿದೆ. ಗ್ರಾಹಕರು ಟೊಮೆಟೋ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದ್ದಾರೆ. ಅನಿವಾರ್ಯ ಹಾರಗಳಿಗೆ ಮಾತ್ರ ಟೊಮೆಟೋ ಬಳಕೆ ಮಾಡುತ್ತಿದ್ದಾರೆ. ಈ ಮಧ್ಯೆ ಟೊಮೆಟೋ ಮಾರಾಟಗಾರರಿಗೆ ಸಹ ಟೊಮೆಟೋ ಮಾರುವುದು ಕಷ್ಟಕರವಾಗಿದೆ. ಕೆಲವು ಕಡೆ ಟೊಮೆಟೋ ಖರೀದಿಸುವವರು ಕೈಚಳಕ ತೋರಿಸಿ ಒಂದೆರಡು ಟೊಮೆಟೋ ಚೀಲಕ್ಕೆ ಹಾಕಿಕೊಳ್ಳುವುದು ಉಂಟು. ಈ ಸಮಸ್ಯೆಗಳಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ವ್ಯಾಪಾರಿಯೊಬ್ಬರು ಇದೀಗ ಸಿಸಿಟಿವಿ ಕ್ಯಾಮರಾ ಇಡುವ ಮೂಲಕ ಟೊಮೆಟೋ ಜೊತೆಗೆ ಅವರು ಸಹ ಸುದ್ದಿಯಾಗಿದ್ದಾರೆ.
ಸದ್ಯ ಟೊಮೆಟೊ ಕಿಲೋ ಬೆಲೆ 150 ರ ಮೇಲಿದೆ. ಒಂದು ಟೊಮೆಟೋ ಕಳ್ಳತನವಾದರು ವರ್ತಕರಿಗೆ ನಷ್ಟವಾಗುತ್ತೆ. ಕೈಚಳಕ ತೋರಿಸುವ ಗ್ರಾಹಕರನ್ನು ಕಂಡುಹಿಡಿಯಲು ಅಕ್ಕಿಆಲೂರು ಗ್ರಾಮದ ವ್ಯಾಪಾರಿ ಕೃಷ್ಣಪ್ಪ ತಮ್ಮ ಚಿಕ್ಕ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮರಾ ಇಟ್ಟಿದ್ದಾರೆ. ಈಗ ಅವರ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಟೊಮೆಟೊ ಮಾರಾಟವಾಗುತ್ತಿದೆ. ಅಧಿಕ ಬೆಲೆ ಬಂದಾಗಿನಿಂದ ಟೊಮೆಟೋ ಮಾರುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ವರ್ತಕ ಕೃಷ್ಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ..Vegetable rate: ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೆಟೋ, ಮೆಣಸಿನಕಾಯಿ ದರ: ತರಕಾರಿ ಬಲು ದುಬಾರಿ.. ಗ್ರಾಹಕರ ಜೇಬಿಗೆ ಕತ್ತರಿ