ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಗಣೇಶ ಚತುರ್ಥಿ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ - ಆಲದಕಟ್ಟೆ ಗ್ರಾಮ

ಹಾವೇರಿ ಸಮೀಪದ ಆಲದಕಟ್ಟೆ ಗ್ರಾಮದಲ್ಲಿನ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಆ.29ರಂದು ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಸ್ನೇಹಿತರು ಸಾವಿಗೀಡಾಗಿದ್ದರು.

Three killed in fire at firecracker warehouse
ದ್ಯಾಮಪ್ಪ ಓಲೇಕಾರ್, ಶಿವಾನಂದ ಅಕ್ಕಿ ಹಾಗೂ ರಮೇಶ ಬಾರ್ಕಿ

By ETV Bharat Karnataka Team

Published : Sep 11, 2023, 10:54 AM IST

Updated : Sep 11, 2023, 2:23 PM IST

ಹಾವೇರಿಯಲ್ಲಿ ಗಣೇಶ ಚತುರ್ಥಿ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ..

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ, ದೀಪಾವಳಿ ಹಬ್ಬ ಬಂದರೆ ಸಾಕು ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ ಈ ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ ಆವರಿಸಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಖುಷಿಪಡುತ್ತಿದ್ದ ಗ್ರಾಮದ ಮೂರು ಜೀವಗಳು ಪಟಾಕಿ ದುರಂತದಲ್ಲಿ ಬಲಿಯಾಗಿವೆ.

ಕಾಟೇನಹಳ್ಳಿ ಗ್ರಾಮದ ಸ್ನೇಹಿತರಾಗಿದ್ದ ಶಿವಾನಂದ ಅಕ್ಕಿ(22), ದ್ಯಾಮಪ್ಪ ಓಲೇಕಾರ್ (25) ಹಾಗೂ ರಮೇಶ ಬಾರ್ಕಿ(26) ಪಟಾಕಿಯಲ್ಲಿ ದುರಂತದಲ್ಲಿ ಸಾವಿಗೀಡಾದವರು. ಆ.29 ರಂದು ಆಲದಕಟ್ಟೆಯ ಗ್ರಾಮದ ಹೊರವಲಯದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಅವಘಡದಲ್ಲಿ ಸ್ನೇಹಿತರು ಸಾವಿಗೀಡಾಗಿದ್ದಾರೆ.

ಗ್ರಾಮದಲ್ಲಿ ಯಾವುದೇ ಧಾರ್ಮಿಕ ಆಚರಣೆ ಇರಲೇ, ಸಂಸ್ಕೃತಿ ಕಾರ್ಯಕ್ರಮಗಳಿರಲೇ ಈ ಮೂವರು ಸ್ನೇಹಿತರು ಹಾಜರಿರುತ್ತಿದ್ದರು. ಆದರೆ ಪಟಾಕಿ ದುರಂತದ ರೂಪದಲ್ಲಿ ಬಂದ ಜವರಾಯ ಜೀವಗಳನ್ನು ಬಲಿಪಡೆದಿದ್ದಾನೆ. ಸ್ನೇಹಿತರನ್ನು ಕಳೆದುಕೊಂಡ ಕಾಟೇನಹಳ್ಳಿ ಗ್ರಾಮ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ. ಆದರೆ ಸಾವನ್ನಪ್ಪಿದ ಮೂವರ ಮನೆಗಳಲ್ಲಿ ಕತ್ತಲು ಆವರಿಸಿದೆ. ಮನೆಗೆ ಬೆಳಕಾಗಬೇಕಾಗಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರ ಒಡಲಲ್ಲಿ ಬೇಸರ ಮಡುಗಟ್ಟಿದೆ.

ಇದನ್ನೂ ಓದಿ:ಹಾವೇರಿ: ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ಈ ಮೂವರ ಕುಟುಂಬದ್ದು ಒಂದೊಂದು ಕಥೆ. ಮೃತ ಶಿವಾನಂದ ಅಕ್ಕಿ ಒಬ್ಬನೇ ಗಂಡು ಮಗ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗಿದೆ. ಶಿವಾನಂದ ತಂದೆಗೆ ಪಾರ್ಶ್ವವಾಯು ತಗುಲಿ 6 ವರ್ಷಗಳಾಗಿದ್ದು, ಮಲಗಿದ್ದಲ್ಲಿಯೇ ಇದ್ದಾರೆ. ದಿನನಿತ್ಯ ತಂದೆಯ ಸೇವೆ ಮಾಡುತ್ತಿದ್ದ ಶಿವಾನಂದ ದುರಂತದಲ್ಲಿ ಸಾವನ್ನಪ್ಪಿದ್ದು, ತಂದೆ ಶಿವಬಸಪ್ಪ ಇನ್ನಿಲ್ಲದ ಯಾತನೆ ಅನುಭವಿಸುತ್ತಿದ್ದಾರೆ. ತಾಯಿ ಕೂಡ ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ದ್ಯಾಮಪ್ಪ ಓಲೇಕಾರ್ ಮನೆಯಲ್ಲಿ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಮನೆಗೆ ಆಸರೆಯಾಗಿದ್ದ ಕಿರಿಯ ಮಗ ದ್ಯಾಮಪ್ಪ ಪಟಾಕಿ ದುರಂತದಲ್ಲಿ ಸಾವನ್ನಪ್ಪಿದ್ದು, ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಫಳಿಸಿದೆ. ದಿನನಿತ್ಯ ದ್ಯಾಮಪ್ಪನ ಭಾವಚಿತ್ರದ ಮುಂದೆ ತಾಯಿ ಶೇಖವ್ವ ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ.

ರಮೇಶ ಬಾರ್ಕಿ ಮನೆಯಲ್ಲೂ ಕತ್ತಲಾವರಿಸಿದೆ. ಕಿರಿಯ ಮಗ ರಮೇಶ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಶಿವಾನಂದ ಮತ್ತು ದ್ಯಾಮಪ್ಪನ ಜತೆ ಸೇರಿಕೊಂಡು ಪಟಾಕಿ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ. ಪಟಾಕಿ ಕೆಲಸ ಮಾಡಿ ಬಂದ ಹಣದಲ್ಲಿ ರಮೇಶ ಕುಟುಂಬದ ಜೀವನ ಸಾಗುತ್ತಿತ್ತು. ಆದರೆ ಸ್ನೇಹಿತರನ್ನು ಕೂಡಿಸಿದ್ದ ಈ ಪಟಾಕಿಯೇ ಮೂವರಿಗೆ ಮೃತ್ಯುವಾಗಿದೆ. ಹಬ್ಬ ಹರಿದಿನ, ಜಯಂತಿಗಳು ಬಂದರೆ ಯಾವುದೇ ಧರ್ಮ, ಜಾತಿ ನೋಡದೆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಜೀವಗಳಿಲ್ಲದೆ ಈ ವರ್ಷ ಗ್ರಾಮದಲ್ಲಿ ಗಣೇಶ ಚತುರ್ಥಿ ಹೇಗೆ ಆಚರಿಸಬೇಕು ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇದನ್ನೂ ಓದಿ:ಹಾವೇರಿ: ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

Last Updated : Sep 11, 2023, 2:23 PM IST

ABOUT THE AUTHOR

...view details