ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ ಹಾವೇರಿ:ಸಮೀಪದ ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನ 25 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ ಮತ್ತು 22 ವರ್ಷದ ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿದೆ. ಮೃತರು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಮೃತದೇಹಗಳು ಪತ್ತೆಯಾಗುತ್ತಿದ್ದಂತೆ ಮೃತರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ. ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದೆ.
ಪರಿಹಾರ ಘೋಷಣೆ:ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಐದು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.
ಘಟನೆಗೆ ಕಾರಣ:ಗೋದಾಮಿನ ಗೇಟ್ ಅನ್ನು ವೆಲ್ಡಿಂಗ್ ಮಾಡಿಸಲು ಮುಂದಾಗಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ವೆಲ್ಡಿಂಗ್ ಮಾಡುತ್ತಿದ್ದಾಗ ಕಿಡಿ ತಾಗಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಕಾರ್ಯಾಚರಣೆ ಸಂಜೆ 4 ಗಂಟೆವರೆಗೆ ನಡೆಯಿತು. ಸುಮಾರು 30ಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳ ನೀರು ಬಳಸಿದರೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ಹರಸಾಹಸದ ಬಳಿಕ ತಹಬದಿಗೆ ಬಂದಿತ್ತು. ಬಳಿಕ ಒಳಹೊಕ್ಕು ನೋಡಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಕಂಡು ಬಂದಿವೆ. ಸುದ್ದಿ ಗೊತ್ತಾಗುತ್ತಿದೆಯಂತೆ ಜಿಲ್ಲಾಧಿಕಾರಿ ರಘುನಂದಮೂರ್ತಿ, ಎಸ್ಪಿ ಶಿವಕುಮಾರ್ ಗುಣಾರೆ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ ''ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಕಾರ್ಯಾಚರಣೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೆಲವರು ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಇತ್ತು. ಸದ್ಯಕ್ಕೆ ಇಷ್ಟು ಮಾಹಿತಿ ಇದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ. ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನ ಮಾಲೀಕರು ಜಿಲ್ಲಾಧಿಕಾರಿ ಅವರಿಂದ ಪರವಾನಿಗೆ ಹೊಂದಿರುವ ಮಾಹಿತಿ ಇದೆ. ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬದ ನಿಮಿತ್ತ ಅಂಗಡಿ ಮಾಲೀಕರು ಭಾರೀ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿರುವ ಮಾಹಿತಿ ತಿಳಿದು ಬಂದಿದೆ. ಕಾನೂನು ಮೀರಿ ಪಟಾಕಿ ಸಂಗ್ರಹ ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮಾಹಿತಿ ಸಂಗ್ರಹದ ಅಗತ್ಯವಿದೆ. ಎಲ್ಲ ಕಾರ್ಯಾಚರಣೆ ಮುಗಿದ ಬಳಿಕ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು'' ಎಂದು ಪರಿಶೀಲನೆ ಬಳಿಕ ಎಸ್ಪಿ ಶಿವಕುಮಾರ್ ಗುಣಾರೆ ಮಾಧ್ಯಮದರಿಗೆ ಮಾಹಿತಿ ನೀಡಿದ್ದಾರೆ.
ಭಾರೀ ಪ್ರಮಾಣದಲ್ಲಿ ಸದ್ದು: ಪಟಾಕಿ ಸಿಡಿದ ಶಬ್ದ ಹಾವೇರಿವರೆಗೂ ಕೇಳಿಸುತ್ತಿತ್ತು. ಭಾರೀ ಪ್ರಮಾಣದ ಸದ್ದು ಕೇಳುತ್ತಿದ್ದಂತೆ ನೂರಾರು ಜನ ಸ್ಥಳದಲ್ಲಿ ಸೇರಿದ್ದರು. ಸುಮಾರು 4 ಗಂಟೆಗಳ ಕಾಲ ಅಗ್ನಿಯ ಕೆನ್ನಾಲಿಗೆ ಮತ್ತು ಹೂಗೆ ಆವರಿಸಿಕೊಂಡಿತ್ತು. ಗೋದಾಮ ಪಕ್ಕದಲ್ಲಿರುವವರನ್ನು ಬೇರೆ ಕಡೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ-ಹಾನಗಲ್ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಹೆಚ್ಚುವರಿ ಪೊಲೀಸ್ ಪಡೆ ಕೂಡ ಸ್ಥಳದಲ್ಲಿ ಬೀಡು ಬಿಟ್ಟಿತ್ತು.
ಇದನ್ನೂ ಓದಿ:ಹಾವೇರಿಯ ಪಟಾಕಿ ದಾಸ್ತಾನು ಗೋದಾಮಿನಲ್ಲಿ ಬೆಂಕಿ.. ಒಂದೂವರೆ ಕೋಟಿ ರೂ. ಮೌಲ್ಯದ ಪಟಾಕಿ ಸುಟ್ಟು ಭಸ್ಮ
ಘಟನಾ ಸ್ಥಳಕ್ಕೆ ರುದ್ರಪ್ಪ ಲಮಾಣಿ ಭೇಟಿ:ಘಟನಾ ಸ್ಥಳಕ್ಕೆ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಭೇಟಿ ನೀಡಿದರು. 'ಪರಿಚಯದವರಿಂದ ವಿಷಯ ತಿಳಿಯಿತು, ವಾಟ್ಸಾಪ್‌ನಲ್ಲಿ ವಿಡಿಯೋ ನೋಡಿದೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ಗೆ ತಿಳಿಸಿದ್ದೇನೆ. ಮಂಗಳವಾರ ರಾತ್ರಿ ಶಿವಾನಂದ ಪಾಟೀಲ್ ಮೈಸೂರು ಪ್ರವಾಸ ಮೊಟಕುಗೊಳಿಸಿ ಹಾವೇರಿಯಲ್ಲಿ ಉಳಿದುಕೊಳ್ಳಲಿದ್ದಾರೆ. ಬೆಳಗ್ಗೆ ಘಟನಾ ಸ್ಥಳಕ್ಕೆ ಸಚಿವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಹಾವೇರಿ ಡಿಸಿ ರಘುನಂದನಮೂರ್ತಿ, ಪಟಾಕಿ ಗೋದಾಮಿನ ಮಾಲೀಕರಿಗೆ ಷರತ್ತು ಮೇಲೆ ಪರವಾನಿಗೆ ನೀಡಲಾಗಿತ್ತು, ಕಾನೂನು ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಕಳೆದ ಕೆಲ ದಿನಗಳ ಹಿಂದೆ ರಾಣೆಬೆನ್ನೂರಲ್ಲಿ ಸ್ಪಾರ್ಕ್ ಕ್ಯಾಂಡಲ್ ಸ್ಫೋಟ ಸಂಭವಿಸಿ ಓರ್ವರು ಸಾವನ್ನಪ್ಪಿದ್ದರು ಎಂದು ತಿಳಿಸಿದರು.